ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಆರ್ಆರ್ಆರ್ ಸಿನಿಮಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಒಂದೊಂದಾಗಿ ಪುಡಿಗಟ್ಟುತ್ತಿದೆ. ಈ ಚಿತ್ರವು ಕೇವಲ ಐದು ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂ. ಗಳ ಬೃಹತ್ ಮೊತ್ತವನ್ನು ಪಡೆದಿದೆ.
ಈ ಮೂಲಕ ನಟ ರಜನಿಕಾಂತ್ ಅವರ 2.0 ಅನ್ನು ಹಿಂದಿಕ್ಕಿ ಸಾರ್ವಕಾಲಿಕ ಮೂರನೇ ಅತಿದೊಡ್ಡ ಭಾರತೀಯ ಚಲನಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾವು ಮಂಗಳವಾರದ ಅಂತ್ಯದ ವೇಳೆಗೆ 412 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.
ಇದು ಶೀಘ್ರದಲ್ಲೇ ಬಾಹುಬಲಿ: ದಿ ಬಿಗಿನಿಂಗ್ ಅನ್ನು ಸೋಲಿಸಲಿದೆ. ಬಾಹುಬಲಿ: ದಿ ಕನ್ಕ್ಲೂಷನ್ ನಂತರ ಈ ಸಾಧನೆ ಮಾಡುವಲ್ಲಿ ಅಗ್ರ ಎರಡನೇ ಚಿತ್ರವಾಗುವತ್ತ ದಾಪುಗಾಲಿಡುತ್ತಿದೆ. ಇದೀಗ ಅಗ್ರ ಪಟ್ಟಿಯಲ್ಲಿರುವ ಮೂರು ಭಾರತೀಯ ಚಲನಚಿತ್ರಗಳು ಕೇವಲ ಒಬ್ಬರು ನಿರ್ದೇಶಕರಿಗಷ್ಟೇ ಸೇರಿದೆ.
ಇದುವರೆಗೆ ಅತಿ ಹೆಚ್ಚು ಸಂಗ್ರಹಣೆಯೊಂದಿಗೆ ಅಗ್ರ ಐದು ಭಾರತೀಯ ಚಲನಚಿತ್ರಗಳ ಪಟ್ಟಿ ಯಾವುದೆಲ್ಲಾ ಅನ್ನೋದು ಈ ಕೆಳಗಿನಂತಿದೆ:
ಬಾಹುಬಲಿ:2 – 1031 ಕೋಟಿ ರೂ.
ಬಾಹುಬಲಿ: ದಿ ಬಿಗಿನಿಂಗ್ – 418 ಕೋಟಿ ರೂ.
ಆರ್ಆರ್ಆರ್ – 412 ಕೋಟಿ ರೂ.
2.0 – 408 ಕೋಟಿ ರೂ.
ದಂಗಲ್ – 387.39 ಕೋಟಿ ರೂ.
ನಟ ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿರುವ ಬಾಹುಬಲಿ ಮತ್ತು ಅಲ್ಲು ಅರ್ಜುನ್ ಅವರ ಪುಷ್ಪಾ ನಂತರ ಹಿಂದಿ ಮಾರುಕಟ್ಟೆಯಲ್ಲಿ ಸಾಧನೆ ಮಾಡಿದ ಮೂರನೇ ಚಿತ್ರ ಎಂಬ ಖ್ಯಾತಿಗೆ ಆರ್ಆರ್ಆರ್ ಪಾತ್ರವಾಗಿದೆ.