ಬಾಂಗ್ಲಾದೇಶ ಕೂಡ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗುವ ಸೂಚನೆಗಳು ಸಿಕ್ಕಿವೆ. ಬಾಂಗ್ಲಾದಲ್ಲಿ ಇಂಧನ ಮತ್ತು ವಿದ್ಯುತ್ ಕೊರತೆ ತಲೆದೋರಿದೆ. ಪರಿಣಾಮ ವಾರದಲ್ಲಿ ನಾಲ್ಕು ದಿನಗಳು ಮಾತ್ರ ಶಾಲಾ, ಕಾಲೇಜುಗಳು ಕಾರ್ಯನಿರ್ವಹಿಸುತ್ತವೆ. ಶುಕ್ರವಾರದಿಂದ ಭಾನುವಾರದವರೆಗೂ ಮುಚ್ಚಿರುತ್ತವೆ.
ಇಂಧನ ಉಳಿತಾಯಕ್ಕಾಗಿ ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳ ಅವಧಿಯನ್ನು ಸಹ ಕಡಿತ ಮಾಡಲಾಗಿದೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಇಂಧನ ಬೆಲೆಗಳಲ್ಲಿ ಭಾರೀ ಏರಿಕೆಯಾಗಿದೆ. ವಿದ್ಯುತ್ ಕೊರತೆಯೂ ಉಂಟಾಗುತ್ತಿದೆ. ಹಾಗಾಗಿ ವಿದ್ಯುತ್ ಬಳಕೆಯನ್ನೇ ಕಡಿಮೆ ಮಾಡಲು ಬಾಂಗ್ಲಾದೇಶ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.
ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕುಗಳ ಕೆಲಸದ ಅವಧಿಯನ್ನು ಒಂದು ಗಂಟೆ ಕಡಿತ ಮಾಡಲಾಗಿದೆ. ಖಾಸಗಿ ಕಚೇರಿಗಳಿಗೆ ತಮ್ಮದೇ ಆದ ವೇಳಾಪಟ್ಟಿಯನ್ನು ಹೊಂದಿಸಲು ಅವಕಾಶ ನೀಡಲಾಗಿದೆ.
ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ತೈಲ ಬೆಲೆ ಶೇ.50ಕ್ಕಿಂತಲೂ ಹೆಚ್ಚು ಏರಿಕೆ ಕಂಡಿತ್ತಯ. ಇದೀಗ ವಿಶೇಷ ವ್ಯವಸ್ಥೆ ಅಡಿಯಲ್ಲಿ ರಷ್ಯಾದಿಂದ ಅಗ್ಗದ ಇಂಧನವನ್ನು ಪಡೆಯುವ ಆಯ್ಕೆಗಳನ್ನು ಅಲ್ಲಿನ ಸರ್ಕಾರ ಹುಡುಕುತ್ತಿದೆ.
ಈ ನಿರ್ಧಾರವು ಟೀಕೆಗೆ ಗುರಿಯಾಗಿದೆ. ಆದರೆ ಇದು ಅನಿವಾರ್ಯವೆಂದು ಬಾಂಗ್ಲಾ ಸರ್ಕಾರ ಹೇಳಿಕೊಂಡಿದೆ. ಸರ್ಕಾರ ಎಲ್ಲಾ ಡೀಸೆಲ್-ಚಾಲಿತ ವಿದ್ಯುತ್ ಸ್ಥಾವರಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ದೈನಂದಿನ ವಿದ್ಯುತ್ ಉತ್ಪಾದನೆಯನ್ನು 1,000 ಮೆಗಾವ್ಯಾಟ್‌ಗಳಷ್ಟು ಕಡಿಮೆ ಮಾಡಿದೆ. ಇದರಿಂದಾಗಿ ಪ್ರತಿನಿತ್ಯ ವಿದ್ಯುತ್ ಕಡಿತ ಸರ್ವೇಸಾಮಾನ್ಯವಾಗಿಬಿಟ್ಟಿದೆ.