ಬಿಹಾರದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಬಿಜಯ್ ಅಗರವಾಲ್ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಗೂಗಲ್, ಮೈಕ್ರೋಸಾಫ್ಟ್ ಮತ್ತು ಜೆಪಿಎಂಸಿಯಂತಹ ಕಂಪನಿಗಳು ಅವರ ಬಾಡಿಗೆದಾರರು. ಅಷ್ಟೇ ಅಲ್ಲ ಬಿಜಯ್ ಅಗರ್ವಾಲ್ ಬಾಡಿಗೆಯಿಂದಲೇ ನೂರಾರು ಕೋಟಿ ಗಳಿಸುತ್ತಾರೆ. 5000 ರೂಪಾಯಿ ಸಂಬಳದ ಉದ್ಯೋಗದೊಂದಿಗೆ ಜೀವನ ಆರಂಭಿಸಿದ ಬಿಜಯ್ ಅಗರ್ವಾಲ್ ಈಗ 5000 ಕೋಟಿ ರೂಪಾಯಿ ವ್ಯವಹಾರವನ್ನು ಸ್ಥಾಪಿಸಿದ್ದಾರೆ. ಅವರ ಮುಖ್ಯ ಉದ್ಯೋಗ ಬಾಡಿಗೆ.
ಗೋಲ್ಡ್‌ಮನ್ ಸ್ಯಾಚ್ಸ್ ಹೈದರಾಬಾದ್‌ನಲ್ಲಿರುವ ಈ ಆಸ್ತಿಯನ್ನು 117 ತಿಂಗಳಿಗೆ ಗುತ್ತಿಗೆಗೆ ತೆಗೆದುಕೊಂಡಿದೆ. ಕಟ್ಟಡದ ಮಾಸಿಕ ಬಾಡಿಗೆ 4.14 ಕೋಟಿ ರೂಪಾಯಿ. ಇದು ಬಿಜಯ್ ಅಗರ್ವಾಲ್ ಅವರಿಗೆ ಸೇರಿದ್ದು. ಬಿಜಯ್ ಅಗರ್ವಾಲ್ ಸತ್ವ ಗ್ರೂಪ್‌ನ ಎಂಡಿ ಮತ್ತು ಪ್ರಮೋಟರ್ ಆಗಿದ್ದಾರೆ. ಬಿಜಯ್, ಬಿಹಾರದ ಕಿಶನ್‌ಗಂಜ್ ಮೂಲದವರು. ಅವರ ತಂದೆ 1965 ರಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದು ಬಿಹಾರದಲ್ಲಿ ನೆಲೆಸಿದರು. ಸಣ್ಣ ವ್ಯಾಪಾರ ಮಾಡಿಕೊಂಡು 9 ಮಕ್ಕಳ ದೊಡ್ಡ ಕುಟುಂಬವನ್ನು ನಿರ್ವಹಿಸುತ್ತಿದ್ರು.
ಬಿಜಯ್ ಅಗರ್ವಾಲ್ ಅವರ ಬಾಲ್ಯ ಬಡತನದಲ್ಲಿ ಕಳೆದಿದೆ. ಸಹೋದರಿಯ ಮದುವೆಯ ಬಳಿಕ ತಮ್ಮ ಸೋದರ ಮಾವನ ಅಂಗಡಿಯಲ್ಲಿ ಕೆಲಸ ಮಾಡಲು ಬಿಜಯ್ ಪಶ್ಚಿಮ ಬಂಗಾಳದ ರಾಜಿಗಂಜ್‌ಗೆ ತೆರಳಿದರು. ವ್ಯಾಪಾರದ ತಂತ್ರಗಳನ್ನು ಕಲಿತದ್ದು ಇಲ್ಲಿಯೇ. ಸೋದರ ಮಾವನೊಂದಿಗೆ ಸ್ವಲ್ಪ ಸಮಯ ಕೆಲಸ ಮಾಡಿದ ನಂತರ ಅವರು 1985 ರಲ್ಲಿ ಕೋಲ್ಕತ್ತಾಗೆ ತೆರಳಿದರು. ಇಲ್ಲಿ ಹಣಕಾಸು ನಿಗಮದ ಕಂಪನಿಯಲ್ಲಿ ಕೆಲಸ ಪ್ರಾರಂಭಿಸಿದರು. 1993 ರಲ್ಲಿ, ಅವರು ಜಿಡಿ ಸಲಾರ್ಪುರಿಯಾ ಅವರೊಂದಿಗೆ ಬೆಂಗಳೂರಿನಲ್ಲಿ ಮೊದಲ ಯೋಜನೆಯನ್ನು ಪ್ರಾರಂಭಿಸಿದರು.
ನಂತರ ಹಿಂದಿರುಗಿ ನೋಡಲೇ ಅಲ್ಲ, ಅನೇಕ ಸಣ್ಣ ಮತ್ತು ದೊಡ್ಡ ಯೋಜನೆಗಳನ್ನು ಪ್ರಾರಂಭಿಸಿದರು. ಇಲ್ಲಿಂದಲೇ ಅವರಿಗೆ ಪ್ರಗತಿಯ ಹಾದಿ ಸಿಕ್ಕಿತು. ಸಲಾರ್ಪುರಿಯಾ-ಸತ್ವ ಎಂಬ ಗ್ರೂಪ್ ಒಂದನ್ನು ಪ್ರಾರಂಭಿಸಿದರು. ಅವರ ಕಂಪನಿ ಬೆಂಗಳೂರಿನಲ್ಲಿ 34 ವರ್ಷಗಳಿಂದ ಕೆಲಸ ಮಾಡುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಕಂಪನಿಯು ಹೈದರಾಬಾದ್‌ನಲ್ಲೂ ವಹಿವಾಟನ್ನು ವಿಸ್ತರಿಸಿದೆ. ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಗುತ್ತಿಗೆ ನೀಡಿರುವ ಕಟ್ಟಡಗಳಿಂದಲೇ ಕಂಪನಿಗೆ ಉತ್ತಮ ಆದಾಯವಿದೆ.
2020 ರಲ್ಲಿ ಕಂಪನಿಯ ವಾರ್ಷಿಕ ಆದಾಯವು ಬಾಡಿಗೆಯಿಂದ 857 ಕೋಟಿ ರೂಪಾಯಿ ಇತ್ತು. ಸಲಾರ್‌ಪುರಿಯಾ-ಸತ್ವ ಸಮೂಹವು 55.4 ಮಿಲಿಯನ್ ಚದರ ಅಡಿಗಿಂತಲೂ ಹೆಚ್ಚು ಬಿಲ್ಟ್-ಅಪ್ ಪ್ರದೇಶವನ್ನು ಸೃಷ್ಟಿಸಿದೆ. 2021ರಲ್ಲಿ ಕಂಪನಿಯ ಬಾಡಿಗೆ ಆದಾಯ 761 ಕೋಟಿ ರೂಪಾಯಿಗೆ ಇಳಿದಿದೆ. ಬಿಜಯ್ ಅಗರ್ವಾಲ್ ಅವರ ಒಟ್ಟು ಆಸ್ತಿಯ ನಿವ್ವಳ ಮೌಲ್ಯ 4170 ಕೋಟಿ ರೂಪಾಯಿ. ಸಣ್ಣ ಕೆಲಸದಿಂದ ಆರಂಭವಾದ ಬಿಜಯ್ ಅಗರ್ವಾಲ್ ಅವರ ಕಂಪನಿಯಲ್ಲಿ ಇಂದು 1600 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.