ತನ್ನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸಿದ್ದ ಮಹಿಳೆಯೊಬ್ಬಳಿಗೆ ಒಂದು ವರ್ಷದ ಗೃಹ ಬಂಧನ ವಿಧಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿರುವ ಸೆಷನ್ಸ್ ನ್ಯಾಯಾಲಯ, ಬಹಿರಂಗ ವೇಶ್ಯಾವಾಟಿಕೆ ಮಾತ್ರ ಅಪರಾಧ ಎಂದು ಹೇಳಿದೆ.
ಮುಂಬೈ ನ್ಯಾಯಾಲಯದಿಂದ ಮಂಗಳವಾರ ಈ ಅಭಿಪ್ರಾಯ ವ್ಯಕ್ತವಾಗಿದ್ದು, ವೇಶ್ಯಾವಾಟಿಕೆ ನಡೆಸುವುದು ಅಪರಾಧವಲ್ಲ. ಆದರೆ ಅದು ಬಹಿರಂಗವಾಗಿ ನಡೆಯುವುದರಿಂದ ಇತರರಿಗೆ ಕಿರಿಕಿರಿ ಉಂಟಾದ ಸಂದರ್ಭದಲ್ಲಿ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.
ಸಂವಿಧಾನದ 19 ನೇ ವಿಧಿ ಪ್ರಕಾರ ಎಲ್ಲರೂ ಇಷ್ಟ ಬಂದ ಕಡೆ ಓಡಾಡಲು ಮತ್ತು ವಾಸಿಸಲು ಅವಕಾಶವಿದೆ. ಸಂತ್ರಸ್ತೆ ಪ್ರಾಪ್ತ ವಯಸ್ಕಳಾಗಿರುವುದರ ಜೊತೆಗೆ ಭಾರತೀಯ ಪ್ರಜೆಯಾಗಿದ್ದು, ಹೀಗಾಗಿ ಈ ಎಲ್ಲಾ ಹಕ್ಕುಗಳು ಆಕೆಗೆ ಅನ್ವಯಿಸಲಿದೆ. ಆಕೆಯನ್ನು ಗೃಹಬಂಧನದಲ್ಲಿಡುವುದು ಈ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಕರಣದ ವಿವರ: ಕಳೆದ ಫೆಬ್ರವರಿಯಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿದ್ದ ಮುಂಬೈ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ 34 ವರ್ಷದ ಮಹಿಳೆಯನ್ನು ಬಂಧಿಸಿದ್ದರು. ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆಕೆಯನ್ನು ಒಂದು ವರ್ಷ ಗೃಹ ಬಂಧನದಲ್ಲಿಡಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದೀಗ ಬಿಗ್ ರಿಲೀಫ್ ಸಿಕ್ಕಂತಾಗಿದೆ.