ನವದೆಹಲಿ: ನೂತನ ಸಂಸತ್ ಭವನ ಕಟ್ಟಡದ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಬಸವಣ್ಣನವರ ಅನುಭವ ಮಂಟಪವನ್ನು ಸ್ಮರಿಸಿದ್ದಾರೆ. ಅನುಭವ ಮಂಟಪ ಪ್ರಜಾಪ್ರಭುತ್ವದ ಪ್ರತಿರೂಪವಾಗಿತ್ತು ಎಂದು ಹೇಳಿದ್ದಾರೆ.
12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಕಲ್ಪನೆಯಿತ್ತು. ಬಸವಣ್ಣನವರ ಅನುಭವ ಮಂಟಪ ವಿಶ್ವದ ಮೊದಲ ಸಂಸತ್. ಅನುಭವ ಮಂಟಪದ ಮೂಲಕ ನಾಡಿನ ಉನ್ನತಿಗಾಗಿ ಶ್ರಮಿಸಲಾಗುತ್ತಿತ್ತು ಎಂದು ಅಂದೇ ಬಸವಣ್ಣವನರು ಹೇಳಿದ್ದರು ಎಂದರು.
ಭಾರತ ಪ್ರಜಾಪ್ರಭುತ್ವದ ತಾಯಿ. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವೈಶಿಷ್ಠ್ಯ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶವಿರುತ್ತದೆ. ಆದರೆ, ಎಂದಿಗೂ ಸಂಪರ್ಕ ಕಳೆದುಕೊಳ್ಳಬಾರದು. ಸಂವಾದವೇ ಪ್ರಜಾಪ್ರಭುತ್ವದ ಆತ್ಮ. ದೇವಾಲಯದಲ್ಲಿ ಮೂರ್ತಿ ಸ್ಥಾಪನೆಯಾದಾಗ ಮಾತ್ರ ಅದು ನಿಜವಾದ ದೇವಾಲಯವಾಗುತ್ತದೆ. ದೇವರ ಸ್ಥಾಪನೆಯಾಗುವವರೆಗೂ ಅದು ಕೇವಲ ಕಟ್ಟಡವಾಗಿಯೇ ಇರುತ್ತದೆ. ಹಾಗೇ ಸಂಸದರು ಆಯ್ಕೆಯಾಗಿ ಬಂದಾಗ ಮಾತ್ರ ಸಂಸತ್ ಗೆ ಬೆಲೆ ಬರುತ್ತದೆ. ಸಂಸದರು ಕಲಾಪದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು. ದೇಶದ ಅಭಿವೃದ್ಧಿಗಾಗಿ ಗಮನಹರಿಸಬೇಕು ಎಂದು ಹೇಳಿದರು.
ರಾಷ್ಟ್ರ ಅಭಿವೃದ್ಧಿಯಾಗಬೇಕೆಂದರೆ ರಾಜ್ಯ ಅಭಿವೃದ್ಧಿಯಾಗಬೇಕು. ಇದು ಮೂಲಭೂತ ಸಿದ್ಧಾಂತ. ದೇಶದ ಅಭಿವೃದ್ಧಿಗೆ ಸಂಸದರು ತೊಡಗಿಕೊಳ್ಳಬೇಕು. ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತಕ್ಕೆ ಹೆಚ್ಚಿನ ಅವಕಾಶವಿದೆ. ಪ್ರತಿಯೊಬ್ಬರೂ ಹೊಸ ಸಂಕಲ್ಪದ ಶಿಲಾನ್ಯಾಸ ಮಾಡಬೇಕು. ಇಂದು ಪ್ರಜಾಪ್ರಭುತ್ವದ ಐತಿಹಾಸಿಕ ದಿನ 2022 ಕ್ಕೆ ನೂತನ ಸಂಸತ್ ಭವನದ ಉದ್ಘಾಟನೆಯಾಗಲಿದ್ದು, 130 ಕೋಟಿ ಭಾರತಿಯರು ಸಾಕ್ಷಿಯಾಗಲಿದ್ದಾರೆ ಎಂದರು.