ಹಿಜಾಬ್ – ಕೇಸರಿ ಶಾಲು ವಿವಾದ ಈಗ ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆದಿರುವ ವೇಳೆ ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್, ಶಾಲಾ – ಕಾಲೇಜು ವಿದ್ಯಾರ್ಥಿಗಳು ಅಂತಿಮ ಆದೇಶ ಬರುವವರೆಗೂ ಯಾವುದೇ ಧಾರ್ಮಿಕ ವಸ್ತ್ರ, ಚಿನ್ಹೆಗಳನ್ನು ಧರಿಸಿ ಬರುವಂತಿಲ್ಲ ಎಂದು ಆದೇಶಿಸಿದೆ.
ಇಂದಿನಿಂದ ಪದವಿಪೂರ್ವ ಕಾಲೇಜುಗಳು ಆರಂಭವಾಗಿದ್ದು, ಕೋರ್ಟ್ ಮಧ್ಯಂತರ ಆದೇಶದ ನಡುವೆಯೂ ಕೆಲವೊಂದು ಕಾಲೇಜುಗಳ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ತಾವು ತರಗತಿಗೆ ಹಾಜರಾಗುವುದಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಮಾತಿನ ಚಕಮಕಿ, ವಾದ – ವಿವಾದಗಳು ನಡೆದಿರುವ ಘಟನೆಗಳು ಅಲ್ಲಲ್ಲ ನಡೆದಿದೆ.
ಬಳ್ಳಾರಿಯ ಸರಳಾದೇವಿ ಕಾಲೇಜಿನಲ್ಲೂ ಇಂದು ಹೈಡ್ರಾಮಾ ನಡೆದಿದ್ದು, ಹಿಜಾಬ್ ಧರಿಸಿ ಬಂದಿದ್ದ ಕೆಲ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಧಾರ್ಮಿಕ ಹಕ್ಕು. ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯುವುದಿಲ್ಲ. ಇದನ್ನು ಧರಿಸಿಯೇ ತರಗತಿಗೆ ಹಾಜರಾಗುವುದಾಗಿ ಪಟ್ಟು ಹಿಡಿದಿದ್ದಾರೆ. ಅವರುಗಳ ಮನವೊಲಿಸಲು ಪ್ರಾಚಾರ್ಯರು ಪ್ರಯತ್ನಿಸಿದಾದರೂ ವಿದ್ಯಾರ್ಥಿನಿಯರು ಪಟ್ಟು ಸಡಿಲಿಸಿಲ್ಲ. ಅಂತಿಮವಾಗಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗದೆ ವಾಪಾಸ್ಸಾಗಿದ್ದಾರೆ.