ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೈಗೊಂಡಿರುವ ‘ಭಾರತ ಐಕ್ಯತಾ ಯಾತ್ರೆ’ ರಾಜ್ಯ ಪ್ರವೇಶಿಸಿ ಈಗಾಗಲೇ 13 ದಿನ ಕಳೆದಿದೆ. ಇದೀಗ ಯಾತ್ರೆ ಗಣಿ ಜಿಲ್ಲೆ ಬಳ್ಳಾರಿ ಪ್ರವೇಶಿಸಿದ್ದು, ಅಕ್ಟೋಬರ್ 15 ರಂದು ಅಲ್ಲಿನ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬೃಹತ್ ‘ಐಕ್ಯತಾ ಯಾತ್ರೆ’ ಸಮಾವೇಶ ನಡೆಯಲಿದೆ.
ಸಮಾವೇಶದಲ್ಲಿ ಮೂರು ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಬೃಹತ್ ವೇದಿಕೆ ನಿರ್ಮಿಸಲಾಗಿದೆ. ವೇದಿಕೆಯಿಂದ ಪ್ರವೇಶ ದ್ವಾರದವರೆಗೂ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ಮಳೆ ಬಂದರೂ ಯಾವುದೇ ಅಡೆತಡೆ ಎದುರಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರು ಸ್ಥಳದಲ್ಲಿಯೇ ಬೀಡುಬಿಟ್ಟು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಇದರ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಐಕ್ಯತಾ ಯಾತ್ರೆ ಸಮಾವೇಶಕ್ಕೆ ಬಳ್ಳಾರಿಯನ್ನು ಆಯ್ಕೆ ಮಾಡಿಕೊಂಡಿದ್ದರ ಹಿಂದೆ ಯಾವುದೇ ತಂತ್ರಗಾರಿಕೆ ಇಲ್ಲ. ಸಂಪರ್ಕದ ದೃಷ್ಟಿಯಿಂದ ದೊಡ್ಡ ನಗರ ಹಾಗೂ ತೆಲಂಗಾಣದ ಕಾರ್ಯಕರ್ತರು ಸಹ ಬರಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಬಳ್ಳಾರಿಯಲ್ಲಿ ಸಮಾವೇಶ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.