ಮಾಂಸಹಾರ ಪ್ರಿಯರಿಗೆ ಮೀನಿನ ಸಾರು ಇದ್ದರೆ ಊಟ ಹೊಟ್ಟೆಗೆ ಹೋಗಿದ್ದೇ ತಿಳಿಯುವುದಿಲ್ಲ. ಮೀನು ಪ್ರಿಯರು ಒಮ್ಮೆ ಕೇರಳ ಸ್ಟೈಲ್ ನ ಈ ರುಚಿಕರವಾದ ಮೀನಿನ ಸಾಂಬಾರು ಮಾಡಿಕೊಂಡು ಸವಿದು ನೋಡಿ.
ಬೇಕಾಗುವ ಸಾಮಗ್ರಿಗಳು:
3 ಟೇಬಲ್ ಸ್ಪೂನ್ – ತೆಂಗಿನೆಣ್ಣೆ, ½ ಟೀ ಸ್ಪೂನ್ – ಸಾಸಿವೆ, 12 – ಕರಿಬೇವು, ಈರುಳ್ಳಿ – 1 ಸಣ್ಣಗೆ ಹಚ್ಚಿದ್ದು, 2 ಟೀ ಸ್ಪೂನ್ – ಶುಂಠಿ ತುರಿ, 2 ಟೇಬಲ್ ಸ್ಪೂನ್ – ಬೆಳ್ಳುಳ್ಳಿ ಎಸಳು, 2 – ಹಸಿಮೆಣಸು, 1 ಟೇಬಲ್ ಸ್ಪೂನ್ – ಕೊತ್ತಂಬರಿ ಪುಡಿ, ½ ಟೀ ಸ್ಪೂನ್ – ಅರಿಶಿನ, 2 ಟೇಬಲ್ ಸ್ಪೂನ್ – ಖಾರದಪುಡಿ, ¼ ಟೀ ಸ್ಪೂನ್ – ಕಾಳುಮೆಣಸಿನ ಪುಡಿ, ½ ಟೀ ಸ್ಪೂನ್ – ಮೆಂತೆ ಪುಡಿ, ಸಣ್ಣ ಗಾತ್ರದ ಹುಳಿ, ಉಪ್ಪು ರುಚಿಗೆ ತಕ್ಕಷ್ಟು, 600 ಗ್ರಾಂ ಮೀನು.
ಮಾಡುವ ವಿಧಾನ:
ಮೊದಲಿಗೆ ಒಂದು ಅಗಲವಾದ ಪ್ಯಾನ್ ಗೆ ತೆಂಗಿನೆಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಸಾಸಿವೆ, ಕರಿಬೇವು ಹಾಕಿ. ನಂತರ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ.
ನಂತರ ಒಂದು ಬೌಲ್ ಗೆ ಕೊತ್ತಂಬರಿ ಪುಡಿ, ಅರಿಶಿನ, ಖಾರದ ಪುಡಿ, ಕಾಳುಮೆಣಸಿನ ಪುಡಿ, ಮೆಂತೆಪುಡಿ ಹಾಕಿ 1 ಚಮಚ ನೀರು ಹಾಕಿ ದಪ್ಪ ಮಿಶ್ರಣ ಮಾಡಿಕೊಳ್ಳಿ.
ಈ ಮಿಶ್ರಣವನ್ನು ಪ್ಯಾನ್ ಗೆ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ಇದಕ್ಕೆ 2 ಕಪ್ ನೀರು ಹಾಕಿ ಹುಳಿ ಹಾಕಿ ಕುದಿಸಿಕೊಳ್ಳಿ. ಬಳಿಕ ಮೀನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 10 ನಿಮಿಷಗಳ ಕಾಲ ಕುದಿಸಿಕೊಂಡು ಗ್ಯಾಸ್ ಆಫ್ ಮಾಡಿ.