ಬೆಂಗಳೂರು: ರಾಜ್ಯದಲ್ಲಿ ಮತಾಂತರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಕೆಲ ಸದಸ್ಯರು ಪ್ರಸ್ತಾಪಿಸಿದ್ದಾರೆ. ಈ ನಿಟ್ಟಿನಲ್ಲಿ ಬೇರೆ ರಾಜ್ಯದಲ್ಲಿ ಜಾರಿಯಾಗಿರುವ ಕಾನೂನು ಕ್ರಮಗಳನ್ನು ನಮ್ಮ ರಾಜ್ಯದಲ್ಲೂ ಜಾರಿಗೆ ಒತ್ತಾಯಿಸಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಲವಂತದ ಮತಾಂತರ ಕಾನೂನು ಬಾಹಿರ. ಹಾಗಾಗಿ ಬೇರೆ ಬೇರೆ ರಾಜ್ಯಗಳ ಕಾನೂನು ಪರಿಶೀಲಿಸಿ ರಾಜ್ಯದಲ್ಲೂ ಕಾಯ್ದೆ ಜಾರಿ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.
ಇದೇ ವೇಳೆ ಕರಾವಳಿ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ಸ್ಯಾಟಲೈಟ್ ಫೋನ್ ಆಕ್ಟೀವ್ ಆಗಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಸ್ಯಾಟಲೈಟ್ ಫೋನ್ ಗಳ ಬಳಕೆ ಕಾನೂನು ಬಾಹಿರ. 2011ರಲ್ಲಿಯೇ ಕೇಂದ್ರ ಸರ್ಕಾರ ಇದನ್ನು ನಿಷೇಧಿಸಿತ್ತು. ಆದರೆ ಇದೀಗ ಕೆಲ ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ’ರಾ’ ಸಂಸ್ಥೆಯೊಂದಿಗೂ ನಾವು ಸಂಪರ್ಕದಲ್ಲಿದ್ದೇವೆ. ತನಿಖೆ ಚುರುಕುಗೊಂಡಿದೆ ಎಂದು ಹೇಳಿದರು.
ಇನ್ನು ಪಾಕಿಸ್ತಾನ ಏಜೆಂಟ್ ಓರ್ವನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಸೇನಾ ಅಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಘಟನೆಯಾಗಿರುವುದರಿಂದ ಆತಂಕವಿದೆ ಎಂದರು.