ಹೋಂಡಾ ಇನ್ನೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿಲ್ಲ. ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಲು ಸಿದ್ಧವಾಗಿದೆ.
2024 ರಲ್ಲಿ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೋಂಡಾ ಖಚಿತಪಡಿಸಿದೆ. ಇವುಗಳಲ್ಲಿ ಒಂದು ಸ್ಥಿರ ಬ್ಯಾಟರಿ ಸೆಟಪ್ ಹೊಂದಿದ್ದರೆ ಇನ್ನೊಂದು ಸ್ವಾಪ್ ಮಾಡಬಹುದಾದ ಬ್ಯಾಟರಿ ತಂತ್ರಜ್ಞಾನದೊಂದಿಗೆ ಬರಲಿದೆ.
ಕೆಲ ದಿನಗಳ ಹಿಂದಷ್ಟೆ ಹೋಂಡಾ ಕಂಪನಿ ಈ ಎರಡೂ ಸ್ಕೂಟರ್‌ಗಳ ವಿನ್ಯಾಸದ ರೇಖಾಚಿತ್ರವನ್ನು ಬಿಡುಗಡೆ ಮಾಡಿತ್ತು. ಹೋಂಡಾದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದನ್ನು ಆಕ್ಟಿವಾ ಎಲೆಕ್ಟ್ರಿಕ್ ಎಂದು ಹೆಸರಿಸುವ ಸಾಧ್ಯತೆ ಇದೆ. ಹೋಂಡಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದೆ. ಇದರಿಂದಾಗಿ ಟಿವಿಎಸ್ ಐಕ್ಯೂಬ್, ಬಜಾಜ್ ಚೇತಕ್ ಮತ್ತು ಹೀರೋ ವಿಡಾದಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪೈಪೋಟಿ ಎದುರಾಗಬಹುದು.
ಹೋಂಡಾದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಹೊಸ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ. ಈ ಹೊಸ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ವಿವಿಧ ಬ್ಯಾಟರಿ ಆರ್ಕಿಟೆಕ್ಚರ್‌ಗಳು ಮತ್ತು ಇನ್‌ಸ್ಟಾಲೇಶನ್‌ಗಳನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು ಸ್ಥಿರ ಬ್ಯಾಟರಿ ಮತ್ತು ಸ್ವ್ಯಾಪ್ ಮಾಡಬಹುದಾದ ಬ್ಯಾಟರಿ ಫಾರ್ಮ್ಯಾಟ್‌ಗಳನ್ನು ಬೆಂಬಲಿಸುತ್ತದೆ.
ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು, ಹೋಂಡಾ ಕಂಪನಿ ಹೆಚ್ಚಿನ ಭಾಗಗಳನ್ನು ಸ್ಥಳೀಯ ತಯಾರಕರಿಂದಲೇ ಪಡೆಯುತ್ತದೆ. ಬ್ಯಾಟರಿ ಪ್ಯಾಕ್ ಮತ್ತು ಪವರ್ ಕಂಟ್ರೋಲ್ ಯುನಿಟ್ (PCU) ಕೂಡ ಇವುಗಳಲ್ಲೊಂದು. ಅದರ ICE ಸ್ಕೂಟರ್‌ಗಳಂತೆ, ಹೋಂಡಾ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ರಫ್ತು ಮಾರುಕಟ್ಟೆಗಳಿಗೂ ಲಭ್ಯವಾಗುವಂತೆ ಮಾಡಬಹುದು.
ಹೋಂಡಾ ಆಕ್ಟಿವಾ ಮಾರಾಟ
ಆಕ್ಟಿವಾ ಹಲವು ವರ್ಷಗಳಿಂದ ಹೋಂಡಾ ಮೋಟಾರ್ ಕಂಪನಿಯ ಜನಪ್ರಿಯ ಸ್ಕೂಟರ್‌ಗಳಲ್ಲೊಂದು. 2023ರ ಮಾರ್ಚ್‌ನಲ್ಲಿ ಸ್ಕೂಟರ್ ವಿಭಾಗದಲ್ಲಿ ಹೋಂಡಾ ಆಕ್ಟಿವಾ ಅತಿ ಹೆಚ್ಚು ಮಾರಾಟವಾಗಿದೆ. ಹೋಂಡಾ ಆಕ್ಟಿವಾದ ಒಟ್ಟು 1,74,503 ಯುನಿಟ್‌ಗಳು ಮಾರಾಟವಾಗಿವೆ. ಆದರೆ ಮಾರ್ಚ್ 2022 ರಲ್ಲಿ 3,09,549 ಯುನಿಟ್‌ಗಳು ಮಾರಾಟವಾಗಿದ್ದವು. ವಾರ್ಷಿಕ ಆಧಾರದ ಮೇಲೆ ಮಾರಾಟದಲ್ಲಿ ಶೇ.36.2 ರಷ್ಟು ಕುಸಿತ ದಾಖಲಾಗಿದೆ.