ಕೋಲಾರ: ತಮಿಳುನಾಡಿನಿಂದ ಬೆಂಗಳೂರಿಗೆ ಮೊಬೈಲ್ ಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ದರೋಡೆಕೋರರು ಅಡ್ಡಗಟ್ಟಿ 6.39 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಗುರುವಾರ ರಾತ್ರಿ ಕೋಲಾರ ಮಾರ್ಗವಾಗಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಬೆಂಗಳೂರಿನ ಶ್ರೀಜಿ ಟ್ರಾನ್ಸ್ಪೋರ್ಟ್ ಏಜೆನ್ಸಿಗೆ ಸೇರಿದ ಕಂಟೈನರ್ ನಲ್ಲಿ ಚೆನ್ನೈನಿಂದ ಎಂಐ ಕಂಪನಿಯ ಮೊಬೈಲ್ ಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಕಾರಿನಲ್ಲಿ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಕಂಟೇನರ್ ಅಡ್ಡಗಟ್ಟಿದ್ದಾರೆ. ಮುಳಬಾಗಿಲು ತಾಲೂಕು ದೇವರಾಯಸಮುದ್ರ ಬಳಿ ಲಾರಿ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಲಕನ ಬಾಯಿಗೆ ಬಟ್ಟೆ ತುರುಕಿ ಕೈ ಕಾಲು ಕಟ್ಟಿ ಹಾಕಿ ಕಂಟೈನರ್ ನಲ್ಲಿದ್ದ ಮೊಬೈಲ್ ಗಳನ್ನು ಮತ್ತೊಂದು ಲಾರಿಗೆ ತುಂಬಿಸಿಕೊಂಡು ಪರಾರಿಯಾಗಿದ್ದಾರೆ. ದಾರಿಹೋಕರು ಚಾಲಕನನ್ನು ಗಮನಿಸಿ ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಹೇಳಲಾಗಿದೆ.