ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ. ಈ ಚುನಾವಣೆಯಲ್ಲಿ ಅತ್ಯಂತ ಹಳೆಯ ವಿದ್ಯಾರ್ಥಿ ನಾಯಕರೊಬ್ಬರು ಸ್ಪರ್ಧಿಸುತ್ತಿದ್ದಾರೆ. ಈ ಅಭ್ಯರ್ಥಿಯು ಸಾಕಷ್ಟು ವಿಶಿಷ್ಠ ವಿಚಾರಗಳ ಮೂಲಕ ಸುದ್ದಿಯಲ್ಲಿದ್ದಾರೆ.
ಹೌದು..! ತಮ್ಮ ಸುದೀರ್ಘ 40 ವರ್ಷಗಳ ವೃತ್ತಿ ಜೀವನದಲ್ಲಿ ಇವರು ಬರೋಬ್ಬರಿ 251ಕ್ಕೂ ಅಧಿಕ ಬಾರಿ ಜೈಲಿಗೆ ಹೋಗಿದ್ದಾರಂತೆ..!
ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿರುವ ರವಿದಾಸ್ ಮೆಹ್ರೋತ್ರಾ ಲಕ್ನೋ ಕೇಂದ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ. 66 ವರ್ಷದ ಮೆಹ್ರೋತ್ರಾ ಲಕ್ನೋ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯಾಗಿದ್ದು ಕಳೆದ 40 ವರ್ಷಗಳಿಂದ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಜೈಲಿಗೆ ತೆರಳಿರುವ ತಮ್ಮ ದಾಖಲೆಯ ಬಗ್ಗೆ ಮಾತನಾಡಿದ ಮೆಹ್ರೋತ್ರಾ, ನನ್ನ ವಿರುದ್ಧ ಇರುವ ಎಲ್ಲಾ ಪ್ರಕರಣಗಳು ವಿದ್ಯಾರ್ಥಿ ದಿನಗಳಲ್ಲಿ ಹಾಗೂ ನಾನು ರಾಜಕೀಯಕ್ಕೆ ಸೇರಿದ ಬಳಿಕ ನಾನು ನಡೆಸಿದ ಪ್ರತಿಭಟನೆಗಳಿಗೇ ಸಂಬಂಧಿಸಿದ್ದಾಗಿದೆ. ಇದು ನಾನೊಬ್ಬ ದೀರ್ಘಾವಧಿಯ ಹೋರಾಟಗಾರ ಎಂಬುದನ್ನು ಬಿಂಬಿಸುತ್ತದೆ. ನನ್ನ ವಿರುದ್ಧ ಇಲ್ಲಿಯವರೆಗ ಒಂದೇ ಒಂದು ಕ್ರಿಮಿನಲ್ ಕೇಸು ದಾಖಲಾಗಿಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ಶೋಷಣೆಗೆ ಒಳಗಾಗಿರುವ ಮುಸ್ಲಿಮರು, ದಲಿತರು, ಕ್ರಿಶ್ಚಿಯನ್ನರು ಹಾಗೂ ವಿಶೇಷವಾಗಿ ಅನ್ಯಾಯಕ್ಕೊಳಗಾದ ಬ್ರಾಹ್ಮಣರಿಗೆ ಎಸ್ಪಿ ಸರ್ಕಾರವು ಉತ್ತಮ ಸರ್ಕಾರ ಎನಿಸಲಿದೆ. ನಾವು ಎಲ್ಲಾ ವರ್ಗದವರನ್ನು ಪ್ರಗತಿಯ ಪಥದಲ್ಲಿ ಸಾಗುವಂತೆ ಮಾಡುತ್ತೇವೆ. ತಿನ್ನುವ ಆಹಾರ, ಧರಿಸುವ ಬಟ್ಟೆ ಕಡಿಮೆ ದರದಲ್ಲಿ ಸಿಗಬೇಕು ಹಾಗೂ ಔಷಧಿಗಳು ಉಚಿತವಾಗಿ ಜನರಿಗೆ ಸಿಗಬೇಕು ಎಂಬ ಆಶಯವನ್ನು ಹೊಂದಿದ್ದೇವೆ ಎಂದು ಹೇಳಿದರು.