ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಹುಚ್ಚೇಗೌಡನ ದೊಡ್ಡಿ ಗ್ರಾಮದ ನಿವಾಸಿ ಮರಿಗೌಡ ಎಂಬ ರೈತರೊಬ್ಬರು ಬರೋಬ್ಬರಿ 1.10 ಲಕ್ಷ ರೂಪಾಯಿ ತೆತ್ತು ಬಂಡೂರು ಟಗರನ್ನು ಖರೀದಿಸಿದ್ದು, ಇದು ಈಗ ಎಲ್ಲರ ಗಮನ ಸೆಳೆಯುತ್ತಿದೆ.
ದೇವಿಪುರದಲ್ಲಿದ್ದ ಈ ದುಬಾರಿ ಟಗರನ್ನು ಮರಿಗೌಡರು ಖರೀದಿಸಿ ಗ್ರಾಮಕ್ಕೆ ತಂದಾಗ ಇದನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಗ್ರಾಮಸ್ಥರು ನೆರೆದಿದ್ದರು. ಇದನ್ನು ಮೆರವಣಿಗೆ ಮುಖಾಂತರ ಹುಚ್ಚೇಗೌಡನ ದೊಡ್ಡಿ ಗ್ರಾಮಕ್ಕೆ ಕರೆತರಲಾಗಿದೆ.
ಮರಿಗೌಡ ಅವರು ಕುರಿಗಳನ್ನು ಸಾಕಿಕೊಂಡು ಜೀವನ ನಡೆಸುವುದರ ಜೊತೆಗೆ ಟಗರು ತಳಿ ಸಮರ್ಥನೆ ಕೂಡ ಮಾಡುತ್ತಿದ್ದು ಈ ಉದ್ದೇಶದಿಂದಲೇ ಬಂಡೂರು ತಳಿಯನ್ನು ಖರೀದಿಸಿದ್ದಾರೆ.
ಬಂಡೂರು ತಳಿಯ ವಿಶೇಷತೆ ಎಂದರೆ ಇದರ ಮಾಂಸ ತುಂಬಾ ರುಚಿಯಾಗಿರುತ್ತದಲ್ಲದೆ, ಇತರೆ ತಳಿಯ ಕುರಿ / ಟಗರುಗಳಂತೆ ಮಾಂಸದಲ್ಲಿ ಕೊಬ್ಬಿನಾಂಶ ಪ್ರತ್ಯೇಕವಾಗಿರದೆ ಬಂಡೂರು ತಳಿಯ ಟಗರಿನ ಮಾಂಸದ ಎಳೆಗಳ ನಡುವೆ ಕೊಬ್ಬಿನಾಂಶ ಇರುವುದರಿಂದ ಹೆಚ್ಚು ರುಚಿ ಹೊಂದಿದೆ.