ಪ್ರಸ್ತುತ ಇಂಜಿನಿಯರಿಂಗ್ ಪದವೀಧರರಿಗೆ ಆಫರ್ಗಳ ಸುರಿಮಳೆಯೇ ದೊರಕುತ್ತಿದೆ. ಐಐಟಿ ವಿದ್ಯಾರ್ಥಿನಿ, ಬಿಹಾರದ ಹುಡುಗಿ ಸಂಪ್ರೀತಿ ಯಾದವ್ ಗೂಗಲ್ನಲ್ಲಿ 1.10 ಕೋಟಿ ರೂಪಾಯಿ ವಾರ್ಷಿಕ ಪ್ಯಾಕೇಜ್ಗಳ ಕೆಲಸವನ್ನು ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಇವರು ಫೆಬ್ರವರಿ 14ರಂದು ಗೂಗಲ್ ಕಂಪನಿಗೆ ಸೇರಲಿದ್ದಾರೆ.
ಸಂಪ್ರೀತಿ 2014ರಲ್ಲಿ ನೊಟ್ರೆಡೇಮ್ ಅಕಾಡೆಮಿಯಲ್ಲಿ 10ನೇ ತರಗತಿಯನ್ನು ಪೂರೈಸಿದರು. ಬಳಿಕ ದೆಹಲಿಯ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ 12ನೇ ತರಗತಿ ವ್ಯಾಸಂಗ ಮಾಡಿದ್ದಾರೆ. ಇದಾದ ಬಳಿಕ 2016ರಲ್ಲಿ ಜೆಇಇ ಮೇನ್ಸ್ನಲ್ಲಿ ಉತ್ತೀರ್ಣರಾದರು. ಕಳೆದ ವರ್ಷ ಮೇ ತಿಂಗಳಲ್ಲಿ ಸಂಪ್ರೀತಿ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಬಿ ಟೆಕ್ ಪದವಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಇವರು 44 ಲಕ್ಷ ರೂಪಾಯಿ ವಾರ್ಷಿಕ ಪ್ಯಾಕೇಜ್ನಲ್ಲಿ ಮೈಕ್ರೋಸಾಫ್ಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಪಾಟ್ನಾದ ನೆಹರೂ ನಗರದ ನಿವಾಸಿಯಾದ ಬ್ಯಾಂಕ್ ಅಧಿಕಾರಿ ರಾಮಶಂಕರ್ ಯಾದವ್ ಹಾಗೂ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಪ್ರಭಾ ದಂಪತಿಯ ಪುತ್ರಿ ಸಂಪ್ರೀತಿ ಅಡೋಬೆ, ಫ್ಲಿಪ್ಕಾರ್ಟ್ ಸೇರಿದಂತೆ ಇನ್ನಿತರ ಉನ್ನತ ಶ್ರೇಣಿಯ ಕಂಪನಿಗಳಿಂದ ಉದ್ಯೋಗದ ಆಫರ್ಗಳನ್ನು ಪಡೆದಿದ್ದರು.
ಗೂಗಲ್ ಆನ್ಲೈನ್ನಲ್ಲಿ 9 ಸುತ್ತುಗಳಲ್ಲಿ ಸಂದರ್ಶನಗಳನ್ನು ನಡೆಸಿತ್ತು. ಕಂಪನಿಯು 9 ಸುತ್ತುಗಳಲ್ಲಿ ನಡೆದ ಸಂದರ್ಶನದಲ್ಲಿ ನನ್ನ ಉತ್ತರಗಳಿಂದ ತೃಪ್ತವಾಯಿತು. ಹೀಗಾಗಿ ನಾನು ಈ ಕೆಲಸಕ್ಕೆ ಆಯ್ಕೆಯಾದೆ ಎಂದು ಸಂಪ್ರೀತಿ ಹೇಳಿದ್ದಾರೆ.