ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ವೈದ್ಯನೇ ನವಜಾತ ಶಿಶು ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ವೈದ್ಯ ಸೇರಿದಂತೆ ನಾಲ್ವರ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದ ತೀರ್ಥಹಳ್ಳಿ ಯುವತಿ ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ಮಾರ್ಚ್ 14, 2020 ರಂದು ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಗೆ ಹೆರಿಗೆ ಮಾಡಿಸಿದ ವೈದ್ಯ, ಮಗುವನ್ನು ಸಾಕಲು ಸಾಧ್ಯವೇ? ಮದುವೆಯಾಗದೆ ಸಾಕಲು ಸಾಧ್ಯವಿಲ್ಲ. ಇಲ್ಲೇ ಬಿಟ್ಟು ಹೋಗಿ. ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡುತ್ತೇನೆ. ಡಿಸ್ಚಾರ್ಜ್ ಮಾಡುವುದಿಲ್ಲವೆಂದು ಬೆದರಿಸಿದ್ದಾನೆ.
ಅಲ್ಲದೇ, ಮಗುವನ್ನು ವೈದ್ಯ ಹೇಳಿದವರಿಗೆ ಕೊಟ್ಟಿದ್ದು, ಪ್ರತಿಯಾಗಿ ಮಗುವಿಗೆ ಜನ್ಮ ನೀಡಿದ ಯುವತಿಗೆ ಒಂದು ಚೂಡಿದಾರ್ ಮತ್ತು 5000 ರೂ. ಕೊಡಲಾಗಿದೆ. ಮಗುವನ್ನು ಪಡೆದವರು ವೈದ್ಯನಿಗೆ ಯುವತಿಯ ತಾಯಿಯ ಎದುರಲ್ಲೇ 50 ಸಾವಿರ ರೂ. ಕೊಟ್ಟಿದ್ದಾರೆ ಎನ್ನಲಾಗಿದೆ.
ಯುವತಿಯ ತಾಯಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಮಗುವನ್ನು ಕಳೆದುಕೊಂಡು ಖಿನ್ನತೆಗೆ ಒಳಗಾದ ಯುವತಿ ಶಿವಮೊಗ್ಗದ ಎನ್.ಜಿ.ಒ. ಸೇರಿಕೊಂಡಿದ್ದಾಳೆ. ಆಸ್ಪತ್ರೆಯ ದಾಖಲೆಗಳಲ್ಲಿ ಯುವತಿಗೆ ಹೆರಿಗೆಯಾಗಿಲ್ಲ ಎಂದು ನಮೂದಿಸಲಾಗಿದೆ. ಆದರೆ, ಗರ್ಭಿಣಿಯೇ ಆಗಿಲ್ಲದ ಮಗುವನ್ನು ಖರೀದಿಸಿದ್ದ ಮಹಿಳೆಗೆ ಹೆರಿಗೆಯಾಗಿರುವಂತೆ ದಾಖಲಿಲಾಗಿದೆ ಎನ್ನಲಾಗಿದೆ.
ಯುವತಿ ಗರ್ಭಿಣಿಯಾಗಿದ್ದು ಮತ್ತು ಮಗು ಖರೀದಿಸಿದ ಮಹಿಳೆ ಗರ್ಭಿಣಿಯಾಗಿರುವ ಬಗ್ಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಬಳಿ ದಾಖಲಾಗಿಲ್ಲ. ಇದೆಲ್ಲವೂ ರಹಸ್ಯವಾಗಿಯೇ ನಡೆದಿದೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ ಆಸ್ಪತ್ರೆಯ ಹೆರಿಗೆ ತಜ್ಞ ವೈದ್ಯ, ಇಬ್ಬರು ಸ್ಟಾಫ್ ನರ್ಸ್ ಗಳು ಮತ್ತು ಮಗು ಖರೀದಿಸಿದ ಮಹಿಳೆಯ ವಿರುದ್ಧ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.