ಕಾನ್ಪುರ: ವ್ಯಕ್ತಿಯೊಬ್ಬರು ಇಲ್ಲಿನ ವಿಧಾನಸಭೆ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ವಾರಣಾಸಿ ಮೂಲದ ಸಂತೋಷ್ ಮುರತ್ ಸಿಂಗ್ ಎಂಬಾತ ಕಂದಾಯ ದಾಖಲೆಗಳಲ್ಲಿ ಮೃತಪಟ್ಟಿರುವ ದಾಖಲೆ ಇವೆ. ಹೀಗಾಗಿ ತಾನು ಬದುಕಿದ್ದೇನೆ ಎಂದು ಸಾಬೀತುಪಡಿಸಲು ಮಹಾರಾಜಪುರ ವಿಧಾನಸಭಾ ಕ್ಷೇತ್ರಕ್ಕೆ ಅವರು ನಾಮಪತ್ರ ಸಲ್ಲಿಸಿದ್ದರು.
ಕಡ್ಡಾಯ ದಾಖಲೆಗಳನ್ನು ಪೂರೈಸದ ಕಾರಣ ಅವರ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ಖ್ಯಾತ ಬಾಲಿವುಡ್ ತಾರೆ ನಾನಾ ಪಾಟೇಕರ್ ಅವರ ಅಡುಗೆಯವನಾಗಿ ಕೆಲಸ ಮಾಡಿದ್ದೇನೆ ಎಂದು ಹೇಳುವ ಸಿಂಗ್, ಗುರುವಾರ (ಫೆಬ್ರವರಿ 4) ಪ್ರತಿಭಟನೆ ನಡೆಸಿದ್ದಾರೆ. ತಪ್ಪು ಕಾರಣಗಳಿಗಾಗಿ ತಮ್ಮ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ತನ್ನ ಆಸ್ತಿಯನ್ನು ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ತನ್ನ ಸೋದರ ಸಂಬಂಧಿಗಳು ತಾನು ಮೃತಪಟ್ಟಿರುವುದಾಗಿ ಕರಾರುಪತ್ರ ಮಾಡಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ. ತಮ್ಮ ನಾಮಪತ್ರ ತಿರಸ್ಕೃತಗೊಂಡ ತೀವ್ರ ದುಃಖ ತೋಡಿಕೊಂಡ ಅವರು, ಚುನಾವಣೆಯಲ್ಲಿ ಸ್ಪರ್ಧಿಸಿದರೆ ತಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆಯಿದೆ. ಏಕೆಂದರೆ ತಾನು ಬದುಕಿರುವುದು ಸಾಬೀತಾಗುತ್ತದೆ ಎಂಬ ಉದ್ದೇಶದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.
ವಾರಣಾಸಿಯ ಚಿಟೌನಿ ಮೂಲದ ಸಿಂಗ್ ಮೃತಪಟ್ಟಿದ್ದಾರೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಆದಾಯ ದಾಖಲೆಗಳ ಪ್ರಕಾರ, ಅವರು 2003 ರಲ್ಲಿ ಮುಂಬೈನಲ್ಲಿ ನಡೆದ ರೈಲು ಸ್ಫೋಟದಲ್ಲಿ ಮೃತಪಟ್ಟಿದ್ದಾರೆ ಎಂದು ದಾಖಲಾಗಿದೆ. ನಕಲಿ ಮರಣ ಪ್ರಮಾಣ ಪತ್ರದ ಆಧಾರದಲ್ಲಿ ಅವರ 12 ವರೆ ಎಕರೆ ಜಮೀನನ್ನು ಅವರ ಸೋದರ ಸಂಬಂಧಿಗಳು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.