ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ 90 ವರ್ಷದ ಸನ್ಯಾಸಿಯೊಬ್ಬರು ತಾನು ಬದುಕಿದ್ದೇನೆ ಎಂಬುದನ್ನು ಸಾಬೀತುಪಡಿಸಲು ಹೋರಾಟ ನಡೆಸುತ್ತಿದ್ದಾರೆ. ಸನ್ಯಾಸಿ ಕೃಷ್ಣಾನಂದ ಸರಸ್ವತಿ ಸತ್ತಿದ್ದಾರೆ ಎಂದು ದಾಖಲೆಗಳಲ್ಲಿ ನಮೂದಿಸಲಾಗಿದೆ. ಭೂ ಮಾಫಿಯಾದವರು ಕೃಷ್ಣಾನಂದರು ಬದುಕಿದ್ದಾಗಲೇ ಆತ ಸತ್ತಿದ್ದಾರೆಂದು ನಕಲಿ ದಾಖಲೆ ಸೃಷ್ಟಿ ಮಾಡಿಬಿಟ್ಟಿದ್ದಾರೆ.
ಫಿರೋಜಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಸಹ ಈ ಅಕ್ರಮಕ್ಕೆ ಕೈಜೋಡಿಸಿದೆಯಂತೆ. 2021ರ ನವೆಂಬರ್‌ನಲ್ಲಿ ಸನ್ಯಾಸಿಯ ಮರಣ ಪತ್ರವನ್ನು ಸಿದ್ಧಪಡಿಸಲಾಗಿದೆ. ದೇವಸ್ಥಾನದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಭೂಮಾಫಿಯಾದವರು ಈ ತಂತ್ರ ಹೆಣೆದಿದ್ದಾರೆ.
ಮರಣ ಪ್ರಮಾಣ ಪತ್ರ ಸುಳ್ಳು, ತಾನಿನ್ನೂ ಜೀವಂತವಾಗಿದ್ದೇನೆಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ಕೃಷ್ಣಾನಂದ ಸಾಕಷ್ಟು ಪ್ರಯತ್ನ ಮಾಡ್ತಿದ್ದಾರೆ. ಆ ದೇವಸ್ಥಾನದ ಭೂಮಿಯನ್ನು ಕೃಷ್ಣಾನಂದ ನೋಡಿಕೊಳ್ತಿದ್ದಾರಂತೆ. ಅದನ್ನು ಕಬಳಿಸಲು ಈ ರೀತಿ ಮಾಡಲಾಗ್ತಿದೆ ಅಂತಾ ಆರೋಪ ಮಾಡಿರೋ ವೃದ್ಧ ಸನ್ಯಾಸಿ ಈ ಬಗ್ಗೆ ಪುರಸಭೆಯ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಕೃಷ್ಣಾನಂದ ಅವರ ದೂರು ಸ್ವೀಕರಿಸಿರುವ ಫಿರೋಜಾಬಾದ್‌ನ ಮುನ್ಸಿಪಲ್ ಕಮಿಷನರ್, ಕಳೆದ ವರ್ಷ ನೀಡಲಾದ ನಕಲಿ ಮರಣ ಪ್ರಮಾಣ ಪತ್ರದ ಬಗ್ಗೆ ವಿವರವಾದ ತನಿಖೆ ಮಾಡುವುದಾಗಿ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.