ವಯಸ್ಸು ಹೆಚ್ಚಾದಷ್ಟೂ ಇರುವ ಕಾಲಾವಕಾಶವನ್ನು ಸಕಾರಾತ್ಮಕವಾಗಿ ಕಳೆಯಲು ಇಚ್ಛಿಸುತ್ತಿರುವ ಅನೇಕ ಹಿರಿಯ ನಾಗರಿಕರು ತಮ್ಮ ಅಭಿರುಚಿಗಳ ಬೆನ್ನತ್ತಿ ಹೊಸ ವೃತ್ತಿಯ ಆಯ್ಕೆಗಳ ಶೋಧನೆಯಲ್ಲಿ ಭಾಗಿಯಾಗುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎಂಗೇಜ್ ಆಗುವುದು ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಕೊಂಬಿಯಾ ಪೆಸಿಫಿಕ್ ಕಮ್ಯೂನಿಟೀಸ್ ಸಂಸ್ಥೆಯು ದೇಶದ ಹಿರಿಯ ನಾಗರಿಕರನ್ನು ಸಮೀಕ್ಷೆಯೊಂದಕ್ಕೆ ಒಳಪಡಿಸಿದೆ. ಹಿರಿಯರ ಬಗ್ಗೆ ಇರುವ ಸಾಂಪ್ರದಾಯಿಕ ನಂಬಿಕೆಗಳು ಹಾಗೂ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅವರಲ್ಲಿ ಏನೆಲ್ಲಾ ಮಾರ್ಪಾಡುಗಳಾಗುತ್ತಿವೆ ಎಂದು ಅರಿಯಲು ಈ ಸಂಸ್ಥೆಯು ’ದಿ ಪಾಸಿಟಿವ್ ಏಜಿಂಗ್ ರಿಪೋರ್ಟ್’ ಹೊರತಂದಿದೆ.
ದೇಶದ ಜನಸಂಖ್ಯೆಯ 8%ನಷ್ಟು ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. 2050ರ ವೇಳೆಗೆ ಈ ಜನಸಂಖ್ಯೆ ದುಪ್ಪಟ್ಟಾಗಲಿದ್ದು, 31.9 ಕೋಟಿ ಮಂದಿ ಹಿರಿಯ ನಾಗರಿಕರಿರಲಿದ್ದಾರೆ.
ಸಮೀಕ್ಷೆಗೆ ಒಳಪಟ್ಟ ಹಿರಿಯ ನಾಗರಿಕರ ಪೈಕಿ 31%ರಷ್ಟು ಮಂದಿ ತಮ್ಮ ವೃತ್ತಿಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲು ಬಯಸುತ್ತಾರೆ. ತಮ್ಮ ವೈಯಕ್ತಿಕ ಗುರುತುಗಳು ತಂತಮ್ಮ ಆಸಕ್ತಿಗಳನ್ನು ಅವಲಂಬಿಸಿವೆ ಎಂದು 30% ಮಹಿಳೆಯರು ಅಭಿಪ್ರಾಯಪಟ್ಟರೆ, 23% ಪುರುಷರು ಹೀಗೆ ಅಂದುಕೊಂಡಿದ್ದಾರೆ.
ಇದೇ ವರ್ಗದ ಮಹಿಳೆಯರ ಪೈಕಿ 36%ರಷ್ಟು ಮಂದಿ ಪ್ರತಿನಿತ್ಯ ನಾಲ್ಕು ಗಂಟೆಗಳನ್ನು ಸಾಮಾಜಿಕ ಜಾಲತಾಣದ ಮೇಲೆ ವಿನಿಯೋಗಿಸುತ್ತಿದ್ದಲ್ಲಿ, 22%ನಷ್ಟು ಪುರುಷರು ಈ ಕೆಲಸ ಮಾಡುತ್ತಿದ್ದಾರೆ.
’ಜೀವನ ಆರಂಭಗೊಳ್ಳುವುದೇ 60ರಲ್ಲಿ; ಕೆಲಸವಿಲ್ಲ, ಬರೀ ವಿಶ್ರಾಂತಿ, ಇವೇ ಅತ್ಯುತ್ತಮ ವರ್ಷಗಳೆಂದರೆ…!” ಎಂಬ ಮಾತಿನಲ್ಲಿ ಈ ವಯೋವರ್ಗದ 45%ನಷ್ಟು ಮಂದಿ ನಂಬಿಕೆ ಇಟ್ಟಿದ್ದಾರೆ.
ಜೀವನದ ತಮ್ಮೆಲ್ಲಾ ಅಭಿಲಾಷೆಗಳನ್ನು ಈಡೇರಿಸಿಕೊಳ್ಳಲು 60ರ ನಂತರದ ವಯಸ್ಸು ಸೂಕ್ತ ಎಂದು ಸಮೀಕ್ಷೆಯಲ್ಲಿ ಭಾಗಿಯಾದ 31% ಮಂದಿ ಅಭಿಪ್ರಾಯಪಡುತ್ತಾರೆ.