ಮಂಗಳವಾರ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಸಾಧಿಸಿದ ಬಳಿಕ ಇದೇ ಮೊದಲ ಬಾರಿಗೆ ಮಮತಾ, ಪ್ರಧಾನಿ ಮೋದಿಯವರನ್ನ ಭೇಟಿಯಾಗಿದ್ದರು.
ಪ್ರಧಾನಿಯೊಂದಿಗಿನ ಸಭೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಹೆಚ್ಚು ಲಸಿಕೆ ಪೂರೈಕೆಗೆ ಮಮತಾ ಬ್ಯಾನರ್ಜಿ ಬೇಡಿಕೆ ಇಟ್ಟಿದ್ದಾರೆ. ಇದು ಮಾತ್ರವಲ್ಲದೇ ಪಶ್ಚಿಮ ಬಂಗಾಳಕ್ಕೆ ಹೆಸರು ಬದಲಾವಣೆ ಮಾಡುವ ಬಗ್ಗೆಯೂ ಮನವಿ ಮಾಡಿರೋದಾಗಿಯೂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 2018ರಲ್ಲೂ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಹೆಸರು ಬದಲಾವಣೆ ಮಾಡುವ ಬಗ್ಗೆ ಮೋದಿ ಸರ್ಕಾರದ ಎದುರು ಪ್ರಸ್ತಾಪ ಇಟ್ಟಿದ್ದರು. ಆದರೆ ಮಮತಾರ ಈ ಮನವಿಯನ್ನ ಕೇಂದ್ರ ಸರ್ಕಾರ ತಳ್ಳಿ ಹಾಕಿತ್ತು.
ಇದೇ ವೇಳೆ ಪೆಗಾಸಿಸ್ ವಿಚಾರವಾಗಿಯೂ ಪ್ರಧಾನಿ ಜೊತೆ ಸಂವಾದ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಈ ವಿಚಾರವಾಗಿ ಮೋದಿ ಸರ್ವಪಕ್ಷ ಸಭೆ ಕರೆಯಬೇಕು ಹಾಗೂ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣದ ಮೇಲ್ವಿಚಾರಣೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.