ಬೆಂಗಳೂರು: ಪಿ ಎಸ್ ಐ ಹುದ್ದೆ ನೇಮಕಾತಿ ಅಕ್ರಮ, ಕಾನೂನು ಸುವ್ಯವಸ್ಥೆಯಲ್ಲಿ ಪದೇ ಪದೇ ವೈಫಲ್ಯ, ಪ್ರಕರಣಗಳಿಗೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಕಾರ್ಯವೈಖರಿಗಳು ವಿಪಕ್ಷಗಳ ಟೀಕೆಗೆ ಗುರಿಯಾಗಿರುವ ನಡುವೆಯೇ ಗೃಹ ಸಚಿವ ಅರಗ ಜ್ಞಾನೇಂದ್ರ ದಿಢೀರ್ ದೆಹಲಿಗೆ ತೆರಳಿ ವಾಪಸ್ ಆಗಿರುವುದು ಖಾತೆ ಬದಲಾವಣೆಯ ಚರ್ಚೆ ಹುಟ್ಟುಹಾಕಿದೆ.
ಈ ಬೆಳವಣಿಗೆಗಳ ಬಗ್ಗೆ ಸ್ವತಃ ಗೃಹ ಸಚಿವರೇ ಸ್ಪಷ್ಟನೇ ನೀಡಿದ್ದು, ನಾನು ಸಚಿವ ಸ್ಥಾನಕ್ಕಾಗಿ ಯಾವತ್ತೂ ಯಾರ ಬೆನ್ನು ಬಿದ್ದಿಲ್ಲ. ಯಾವುದೇ ಸ್ಥಾನಮಾನ ಬೇಕು ಎಂದು ಯಾವ ಲಾಭಿಗೂ ಮುಂದಾಗಿಲ್ಲ. ದೆಹಲಿಗೆ ಹೋಗಿ ಬಂದಿದ್ದು ತೀರಾ ವೈಯಕ್ತಿಕ ಕೆಲಸಕ್ಕೆ ಎಂದು ತಿಳಿಸಿದ್ದಾರೆ.
ನನಗೆ ಗೃಹ ಖಾತೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ ಎಸ್ ವೈ ಸೇರಿಯೇ ನೀಡಿದ್ದು. ಸಚಿವ ಸ್ಥಾನ ಇದ್ದರೂ, ಇಲ್ಲದಿದ್ದರೂ ಯಾರ ಬಳಿಯೂ ಹೋಗಲ್ಲ. ಲಾಭಿ ನಡೆಸಲು ಯಾವ ನಾಯಕರನ್ನೂ ಭೇಟಿಯಾಗಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಹೇಳಿದರು.