ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ರಸ್ತೆ ಬದಿ ವ್ಯಾಪಾರಿ ಮಾಡುತ್ತಿದ್ದ ಬಡವರಿಂದ ಮಾಮೂಲಿ ವಸೂಲಿ ಮಾಡಲು ಮುಂದಾದ ಪೊಲೀಸ್ ಪೇದೆಯೊಬ್ಬರು ಇದನ್ನು ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ವಿಡಿಯೋ ಮಾಡಿಕೊಳ್ಳುವಾಗ ಪ್ಯಾಂಟ್ ಜಿಪ್ ತೋರಿಸಿ ಅಶ್ಲೀಲ ವರ್ತನೆ ತೋರಿರುವ ಘಟನೆ ನಡೆದಿದೆ.
ಹಾಸನ ನಗರದ ಮಹಾವೀರ ಸರ್ಕಲ್ ಬಳಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಹೂವಿನ ವ್ಯಾಪಾರಿಗಳ ಬಳಿ ಬಂದ ಈ ಪೇದೆ ಮಾಮೂಲಿ ಕೇಳಿದ್ದು, ಕೊಡಲು ನಿರಾಕರಿಸಿದಾಗ ವ್ಯಾಪಾರ ಸಾಮಗ್ರಿಗಳನ್ನು ಕಾಲಿನಿಂದ ಒದ್ದು ದುರ್ವರ್ತನೆ ತೋರಿದ್ದಾರೆ. ಅಲ್ಲದೇ ವ್ಯಾಪಾರ ಮಾಡದಂತೆ ಬಡ ವ್ಯಾಪಾರಿಗಳಿಗೆ ತಾಕೀತು ಮಾಡಿದ್ದಾರೆ.
ಈ ವೇಳೆ ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ ತೆಗೆದು ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲು ಮುಂದಾಗಿದ್ದು, ಇದನ್ನು ಗಮನಿಸಿದ ಪೇದೆ ಅವರ ಬಳಿ ಬಂದು ವಿಡಿಯೋ ಮಾಡ್ತಿಯೇನೋ ಮಾಡಿಕೋ ಎಂದು ಹೇಳಿ ತಮ್ಮ ಪ್ಯಾಂಟ್ ಜಿಪ್ ತೆಗೆಯಲು ಮುಂದಾಗಿದ್ದಾರೆ. ಇದೀಗ ಸಾರ್ವಜನಿಕರೊಬ್ಬರು ಕೆ.ಆರ್. ಎಸ್. ಪಕ್ಷದ ಪದಾಧಿಕಾರಿಗಳಿಗೆ ವಿಡಿಯೋ ಕಳುಹಿಸಿದ್ದು, ದುರ್ವರ್ತನೆ ತೋರಿದ ಪೇದೆ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಒತ್ತಾಯಿಸಲಾಗಿದೆ.