ಬಡ, ಹಿಂದುಳಿದ ಮತ್ತು ಮಧ್ಯಮ ವರ್ಗದವರಿಗೆ ರಿಯಾಯಿತಿ ದರದಲ್ಲಿ ಔಷಧ ಹಾಗೂ ಶಸ್ತ್ರ ಚಿಕಿತ್ಸಾ ಪರಿಕರಗಳು ಲಭ್ಯವಾಗುವ ಜನೌಷಧ ಮಳಿಗೆಗಳು ಇನ್ನಷ್ಟು ತೆರೆಯಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿತ್ತು.
ಇದೀಗ ಸರ್ಕಾರ ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ್ದು, ರಾಜ್ಯದಲ್ಲಿ ಹೊಸದಾಗಿ 500 ಜನೌಷಧ ಮಳಿಗೆಗಳನ್ನು ತೆರೆಯಲು ಚಿಂತನೆ ನಡೆಸಿದೆ. ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ 40 ಮಳಿಗೆ ತೆರೆಯಲು ಅನುಮತಿ ನೀಡುವಂತೆ ಕೋರಿ ಭಾರತೀಯ ಔಷಧ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ್ದು, ಜನೌಷಧ ಮಳಿಗೆ ಸ್ಥಾಪನೆ ವಿಚಾರದಲ್ಲಿ ಉತ್ತರ ಪ್ರದೇಶ ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ಈ ವರ್ಷದ ಫೆಬ್ರವರಿ ಬಳಿಕ 300 ಮಳಿಗೆಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಜನೌಷಧ ಮಳಿಗೆಗಳಲ್ಲಿ ಮಾರುಕಟ್ಟೆ ದರಕ್ಕಿಂತ ಶೇಕಡ 50 ರಿಂದ ಶೇಕಡ 80ರಷ್ಟು ಅಗ್ಗದ ದರದಲ್ಲಿ ದೊರೆಯುತ್ತಿದ್ದು, ಒಟ್ಟು 1,451 ಔಷಧಿಗಳು ಮತ್ತು 240 ಶಸ್ತ್ರ ಚಿಕಿತ್ಸಾ ಪರಿಕರಗಳು ಜೊತೆಗೆ ದುಬಾರಿ ವೆಚ್ಚದ ಕ್ಯಾನ್ಸರ್ ಔಷಧಿಗಳು ಸಹ ಇಲ್ಲಿ ದೊರೆಯುತ್ತಿವೆ.