ಉದ್ಯೋಗದಲ್ಲಿರುವ ಯಾವುದೇ ವ್ಯಕ್ತಿಗೆ ಬಡ್ತಿ ಅನ್ನುವುದು ಜೀವನದಲ್ಲಿ ಅತ್ಯಂತ ಸಂತೋಷ ತರುವ ಸಂಗತಿ. ಆದರೆ ಅಪರೂಪದ ಘಟನೆಯೊಂದರಲ್ಲಿ ಶಿಕ್ಷಕರೊಬ್ಬರು ಬೆಳಿಗ್ಗೆ ಬಡ್ತಿ ಪಡೆದು ಅಂದು ಸಂಜೆಯೇ ನಿವೃತ್ತರಾಗಿದ್ದಾರೆ.
ಇಂತಹದೊಂದು ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ನಡೆದಿದೆ. ಜುನ್ನೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಪಿ.ಎಲ್. ವಾಸನದ ಅವರೇ ನಿವೃತ್ತಿ ದಿನದಂದು ಬಡ್ತಿ ಪಡೆದುಕೊಂಡ ಶಿಕ್ಷಕರಾಗಿದ್ದಾರೆ.
ಜನ್ನೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ಇವರನ್ನು ಬಡ್ತಿಗೊಳಿಸಿ ವರ್ಚಗಲ್ ನ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ನಿಯೋಜಿಸಲಾಗಿದೆ. ಆದರೆ ಅವರು ಅಂದೇ ನಿವೃತ್ತಿಯಾಗಬೇಕಿತ್ತು. ಅದಕ್ಕೂ ಮುನ್ನ ಡಿಡಿಪಿಐ ಕಚೇರಿಯಲ್ಲಿ ಬಡ್ತಿಗಾಗಿ ನಡೆದ ಕೌನ್ಸೆಲಿಂಗ್ ಗೆ ಹಾಜರಾಗಿದ್ದರು.
ನಂತರ ಅವರು ತಾವು ಕಾರ್ಯನಿರ್ವಹಿಸುತ್ತಿದ್ದ ಜನ್ನೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಅಲ್ಲಿಂದ ಬಿಡುಗಡೆ ಪತ್ರ ಪಡೆದ ಬಳಿಕ ವರ್ಚಗಲ್ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಮುಖ್ಯ ಶಿಕ್ಷಕರ ಚಾರ್ಜ್ ತೆಗೆದುಕೊಂಡು ಸಂಜೆ ನಿವೃತ್ತಿ ಹೊಂದಿದ್ದಾರೆ.