
ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು, ಇದರಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂಬ ವಿವಾದ ಈಗ ಶುರುವಾಗಿದೆ. ಹಿಂದೂ ಸಂಘಟನೆಗಳ ಕೆಲ ಕಾರ್ಯಕರ್ತರು ಈ ಕುರಿತಂತೆ ಪೊಲೀಸ್ ದೂರು ಕೂಡ ನೀಡಿದ್ದಾರೆ. ಇದರ ಮಧ್ಯೆ ಪತ್ರಿಕಾಗೋಷ್ಠಿ ನಡೆಸಿದ್ದ ಧನಂಜಯ್ ಚಿತ್ರದಲ್ಲಿ ವೀರಗಾಸೆಗೆ ಯಾವುದೇ ಅವಮಾನ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಧನಂಜಯ್ ವಿರುದ್ಧ ಟೀಕೆ ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಹಲವರು ಧನಂಜಯ್ ಪರ ನಿಂತಿದ್ದಾರೆ. ಅಲ್ಲದೆ westandwithdhanjaya ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಜೊತೆಗೆ ಧನಂಜಯ್ ಮಾತನಾಡಿರುವ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.
ಈ ಪೈಕಿ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಧನಂಜಯ್, ಬಡವರ ಮಕ್ಕಳು ಬೆಳೆಯಬೇಕು ಎಂದು ಹೇಳಿದ್ದು, ಅಲ್ಲದೆ ಚಿತ್ರದಲ್ಲೂ ಇದನ್ನು ಬಳಸಿಕೊಳ್ಳಲಾಗಿದೆ. ಈಗ ಇದೇ ವಿಡಿಯೋವನ್ನು ಧನಂಜಯ್ ಅವರಿಗೆ ಬೆಂಬಲಿಸುತ್ತಿರುವವರು ಹಂಚಿಕೊಳ್ಳುತ್ತಿದ್ದು, ಕನ್ನಡ ನಾಡು ನುಡಿ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಡಾಲಿ ಧನಂಜಯ್ ಅವರಿಗೆ ನಮ್ಮ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.