ಬೆಂಗಳೂರು: ಅಪಾರ್ಟ್ಮೆಂಟ್ ಖರೀದಿಸುವ ಬಡವರಿಗೆ 5 ಲಕ್ಷ ರೂಪಾಯಿ ನೆರವು ನೀಡುವ ಯೋಜನೆ ಜಾರಿಗೆ ಬಿಬಿಎಂಪಿ ಚಿಂತನೆ ನಡೆಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕೊಳಗೇರಿ ಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸುವ ಅಪಾರ್ಟ್ಮೆಂಟ್ ಗಳಲ್ಲಿ ಒಂದು ಬಿ.ಹೆಚ್.ಕೆ. ಫ್ಲ್ಯಾಟ್ ಖರೀದಿಸುವ ಆರ್ಥಿಕ ಹಿಂದುಳಿದ ನಿವೇಶನ ರಹಿತರಿಗೆ 5 ಲಕ್ಷ ರೂ. ಸಹಾಯಧನ ನೀಡಲು ಚಿಂತನೆ ನಡೆಸಲಾಗಿದೆ.
ಯೋಜನೆ ಜಾರಿಗೆ ಬಿಬಿಎಂಪಿ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಡಾ. ರಾಮಪ್ರಸಾತ್ ಮನೋಹರ್ ಪ್ರಸ್ತಾವನೆ ಸಲ್ಲಿಸಿದ್ದು, ಆಯುಕ್ತರು ಒಪ್ಪಿಗೆ ನೀಡಿದ್ದಾರೆ. ಆಡಳಿತಾಧಿಕಾರಿಗಳ ಸಮ್ಮತಿ ಬಾಕಿ ಇದೆ ಎಂದು ಹೇಳಲಾಗಿದೆ.
ನಿವೇಶನ ರಹಿತ ಬಡವರು ಸರ್ಕಾರಿ ಯೋಜನೆಗಳಡಿ ಮನೆ ಖರೀದಿಸಿದರೆ ಅವರಿಗೆ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಗೆ ಬೆಂಗಳೂರು ಅಮೃತೋತ್ಸವ ಮನೆ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 100 ಕೋಟಿ ರೂ. ಮೀಸಲಿಡಲಾಗಿದೆ ಎನ್ನಲಾಗಿದೆ.