ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಇಂತಹ ಕುಟುಂಬಗಳಿಗೆ ಉಚಿತವಾಗಿ 75 ಯೂನಿಟ್ ವಿದ್ಯುತ್ ನೀಡುವ ಯೋಜನೆಯನ್ನು ಸರ್ಕಾರ ಈಗಾಗಲೇ ಜಾರಿಗೊಳಿಸಿದೆ.
ಆದರೆ ಇದು ಅನುಷ್ಠಾನಕ್ಕೆ ಬಂದಿರಲಿಲ್ಲ. ಇದೀಗ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಬೇಕೆಂದು ಸೂಚನೆ ನೀಡಿದ್ದಾರೆ.
ಮಂಗಳವಾರದಂದು ವಿಕಾಸ ಸೌಧದಲ್ಲಿ ನಡೆದ ಎಸ್.ಸಿ. ಎಸ್.ಪಿ.- ಟಿ.ಎಸ್.ಪಿ. ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುವ ವೇಳೆ, ಇಂಧನ ಇಲಾಖೆ ಜಾರಿಗೆ ತಂದಿರುವ ಉಚಿತ ವಿದ್ಯುತ್ ಯೋಜನೆಯನ್ನು ಕೂಡಲೇ ಜಾರಿಗೆ ತರಬೇಕು. ಈ ಸಂಬಂಧ ಅಧಿಕಾರಿಗಳು ತಕ್ಷಣದಿಂದ ಕಾರ್ಯೋನ್ಮುಖರಾಗಬೇಕೆಂದು ಸೂಚಿಸಿದ್ದಾರೆ.