ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ರಾಜಧಾನಿ ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ 8,409 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ 438 ʼನಮ್ಮ ಕ್ಲಿನಿಕ್ʼ ಸ್ಥಾಪನೆ. ಬೆಂಗಳೂರಿನ ನಾಲ್ಕು ಭಾಗಗಳಲ್ಲೂ 500 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಸ್ತಿತ್ವಕ್ಕೆ ತರಲಾಗುವುದು ಎಂದು ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ವಹಿಯಲ್ಲಿರುವ 6 ಲಕ್ಷಕ್ಕೂ ಹೆಚ್ಚು ಸ್ವತ್ತುಗಳು ಎ ವಹಿಗೆ, ಸಿಂಗಾಪುರ ಮಾದರಿಯಲ್ಲಿ ಎನ್ಜಿಇಎಫ್ ಗೆ ಸೇರಿದ 105 ಎಕರೆಯಲ್ಲಿ ಗ್ರೀನ್ ಎಕ್ಸ್ ಪೋ ನಿರ್ಮಾಣ, ಗೊರಗುಂಟೆ ಪಾಳ್ಯ ಜಂಕ್ಷನ್ ನಲ್ಲಿ ಸಿಗ್ನಲ್ ಮುಕ್ತ ವಾಹನ ಸಂಚಾರಕ್ಕೆ ಗ್ರೇಡ್ ಸಪರೇಟರ್ ಮತ್ತು ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲಾಗುವುದು.
ಬನಶಂಕರಿ ಜಂಕ್ಷನ್ ನಲ್ಲಿ 45 ಕೋಟಿ ವೆಚ್ಚದಲ್ಲಿ ಸ್ಕೈವಾಕರ್, ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ಅಭಿವೃದ್ಧಿ ಯೋಜನೆಯಡಿ ಯಲಹಂಕ ಬಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು ನಮ್ಮ ಮೆಟ್ರೋ 3ನೇ ಹಂತ ಯೋಜನೆಗೆ 11,250 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, 15 ಸಾವಿರ ಕೋಟಿ ವೆಚ್ಚದಲ್ಲಿ ಹೊಸ ಮೆಟ್ರೋ ಮಾರ್ಗಕ್ಕೆ ಡಿಪಿಆರ್ ತಯಾರಿಸಲಾಗುತ್ತಿದೆ. 55 ಕೋಟಿ ವೆಚ್ಚದಲ್ಲಿ ಹೊಸ ಮೆಟ್ರೋ ನಿಲ್ದಾಣಗಳ ಸಂಪರ್ಕ ಕಾಮಗಾರಿ ಆರಂಭಿಸಲಾಗುವುದು. ಪ್ರಮುಖವಾಗಿ ವೈಟ್ ಫೀಲ್ಡ್, ಕೆ ಆರ್ ಪುರಂ, ಬೈಯಪ್ಪನಹಳ್ಳಿ, ಯಶವಂತಪುರ, ಜ್ಞಾನಭಾರತಿ, ಯಲಹಂಕ, ರೈಲು ನಿಲ್ದಾಣಕ್ಕೆ ಮೆಟ್ರೋ ರೈಲು ನಿಲ್ದಾಣ ಲಿಂಕ್ ಮಾಡಲಾಗುವುದು ಎಂದು ಹೇಳಿದರು.