ಬೆಂಗಳೂರು: ಸಚಿವರು, ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಸರ್ಕಾರದಿಂದ ವಿಶೇಷ ಘೋಷಣೆ ವಿಚಾರ ವಿಧಾನ ಪರಿಷತ್ ಕಲಾಪದಲ್ಲಿ ಗದ್ದಲ-ಕೋಲಾಹಲಕ್ಕೆ ಕಾರಣವಾಗಿದೆ.
ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಪ್ರಕಟಣೆ ಹೊರಡಿಸುತ್ತಿದ್ದಂತೆ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ‘ಫರ್ಜಾನಾ’ ಹಾಗೂ ‘ವಾಟರ್’ ಎಂಬ ಎರಡು ಸಿನಿಮಾಗಳಿವೆ ಅವನ್ನೂ ತೋರಿಸಿ ಎಂದು ಕಿಡಿಕಾರಿದರು.
ನಿತ್ಯ 13-14 ಗಂಟೆ ಕೆಲಸ ಮಾಡಿ 800 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತಂದ ಮಹಿಳಾ ಪೈಲಟ್…!
ನಾವು ಯಾವ ಸಿನಿಮಾ ನೋಡಬೇಕು ಎಂದು ಸದನದಲ್ಲಿ ಸರ್ಕಾರ ಹೇಳುವ ಅಗತ್ಯವಿಲ್ಲ. ನಮಗೆ ಗೊತ್ತಿದೆ…… ಕೆಲವರು ಸದನದಲ್ಲಿಯೇ ಅಶ್ಲೀಲ ಚಿತ್ರ ನೋಡಿದ್ದಾರೆ. ನಾವು ಅದನ್ನೂ ನೋಡಬೇಕಾ ? ಸರ್ಕಾರ ಇರುವುದು ಪಿಕ್ಚರ್ ತೋರಿಸೊದಿಕ್ಕಾ ? ಸಭಾಪತಿಯಾದವರು ನಿಸ್ಪಕ್ಷಪಾತವಾಗಿರಬೇಕು. ಸಿನಿಮಾ ನೋಡಲು ಆದೇಶ ಹೊರಡಿಸುವುದು ಸರಿಯಲ್ಲ. ಮೊದಲು ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಹರಿಪ್ರಸಾದ್ ಹೇಳಿಕೆಗೆ ಧ್ವನಿಗೂಡಿಸಿದ ಸಲೀಂ ಅಹ್ಮದ್, ಸರ್ಕಾರ ಯಾಕೆ ಬಲವಂತವಾಗಿ ಸಿನಿಮಾ ತೋರಿಸಲು ಹೊರಟಿದೆ ? ಬಜೆಟ್ ಮೇಲಿನ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು ? ಎಂದು ಪ್ರಶ್ನಿಸಿದ್ದಾರೆ. ಸಿನಿಮಾ ನೋಡಬೇಕು ಎಂದು ಸದನದಲ್ಲಿ ಮಾಡಿದ ಘೋಷಣೆಯನ್ನು ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದಿದ್ದಾರೆ.
ʼಕಾಶ್ಮೀರ್ ಫೈಲ್ಸ್ʼ ಸಿನಿಮಾ ನೋಡಲೇಬೇಕು ಎಂದು ಕಡ್ಡಾಯವಿಲ್ಲ, ಇಷ್ಟ ಇದ್ದವರು ನೋಡಬಹುದು ಎಂದು ಸಚಿವ ಸೋಮಶೇಖರ್ ಸಮಜಾಯಿಷಿ ಕೊಟ್ಟಿದ್ದಾರೆ. ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ ಆರಂಭವಾಗಿದೆ. ಕಾಂಗ್ರೆಸ್ ಸದಸ್ಯರು ಘೋಷಣೆ ವಾಪಸ್ ಪಡೆಯುವಂತೆ ಆಗ್ರಹಿಸಿ ಪರಿಷತ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದಕ್ಕೆ ಬಿಜೆಪಿ ಸದಸ್ಯರು ಎಷ್ಟೇ ಧರಣಿ ನಡೆಸಿದರೂ ಸರ್ಕಾರದ ಘೋಷಣೆ ಹಿಂಪಡೆಯಲ್ಲ ಎಂದು ಗುಡುಗಿದರು. ಸದನದಲ್ಲಿ ಗದ್ದಲ-ಕೋಲಾಹಲ ತೀವ್ರಗೊಳ್ಳುತ್ತಿದ್ದಂತೆ ಪರಿಷತ್ ಕಲಾಪನ್ನು ಸ್ಪೀಕರ್ ಹೊರಟ್ಟಿ ಕೆಲಕಾಲ ಮುಂದೂಡಿ ಆದೇಶ ಹೊರಡಿಸಿದರು.