ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2022 ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಸಂಪ್ರದಾಯದಂತೆ ಹಲ್ವಾ ಸಮಾರಂಭ ನಡೆಯಲಿದ್ದು, ಇದಕ್ಕೆ ಸಿದ್ದತೆಗಳು ನಡೆಯುತ್ತಿವೆ. ಕಳೆದ ಬಾರಿ ಹಲ್ವಾ ಸಮಾರಂಭವು ಬಜೆಟ್ ಮಂಡನೆಗೂ 9 ದಿನ ಮುನ್ನ ಅಂದರೆ ಜನವರಿ 22, 2021 ರಂದು ನಡೆದಿತ್ತು.
ಹಲ್ವಾ ಸಮಾರಂಭದ ನಡೆಯುವುದರ ಹಿಂದೆ ಒಂದು ಕಾರಣವಿದೆ. ಯಾವುದೇ ಶುಭ ಕಾರ್ಯದ ಮುನ್ನ ಸಿಹಿ ತಿನ್ನುವ ಪದ್ಧತಿ ಭಾರತದಲ್ಲಿದೆ. ದೇಶದ ಮಹತ್ವದ ಬಜೆಟ್ ಸಿದ್ಧಪಡಿಸುವ ಮುನ್ನವೂ ಹಲ್ವಾ ಸಮಾರಂಭ ನಡೆಯುತ್ತದೆ. ಸಾಂಪ್ರದಾಯಿಕವಾಗಿ ಹಣಕಾಸು ಸಚಿವಾಲಯದಲ್ಲಿ ನಡೆಯುವ ಹಲ್ವಾ ಸಮಾರಂಭಕ್ಕೆ ಸಚಿವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುತ್ತಾರೆ.
ಹಲ್ವಾ ಸಮಾರಂಭದಲ್ಲಿ ಸಿಹಿಯನ್ನು ಬಜೆಟ್ ಮುದ್ರಕರು ಹಾಗೂ ಸಿಬ್ಬಂದಿಗೆ ನೀಡಲಾಗುತ್ತದೆ. ಬಜೆಟ್ ದಾಖಲೆಗಳ ಮುದ್ರಣ ಆರಂಭಿಸುವ ಮೊದಲು ಹಲ್ವಾ ಸಮಾರಂಭ ನಡೆಯುತ್ತದೆ. ಹಲ್ವಾ ಸಮಾರಂಭ ನಡೆದಿದೆ ಎಂದಾದ್ರೆ ಬಜೆಟ್ ದಾಖಲೆ ಮುದ್ರಣ ಶುರುವಾಗಿದೆ ಎಂದರ್ಥ. ಬಜೆಟ್ ಮಂಡನೆಯಾಗುವವರೆಗೂ ಮುದ್ರಣಕಾರರು ಹಾಗೂ ಸಿಬ್ಬಂದಿ ಮೊಬೈಲ್, ಲ್ಯಾಂಡ್ ಫೋನ್ ಬಂದ್ ಇರುತ್ತದೆ.