ಬಜರಂಗ ದಳ ಕಾರ್ಯಕರ್ತ ಹರ್ಷ ಅವರ ಹತ್ಯೆ ನಡೆದ ಬಳಿಕ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಆರು ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದು, ಮತ್ತಷ್ಟು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದರಾ ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.
ಮೂಲಗಳ ಪ್ರಕಾರ ಹರ್ಷ ಕೊಲೆಗೆ ಈಗಾಗಲೇ ಜೈಲಿನಲ್ಲಿರುವ ಕೆಲವರು ಸ್ಕೆಚ್ ಹಾಕಿರಬಹುದೆಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ ಎನ್ನಲಾಗಿದೆ. ಅದರಲ್ಲೂ ಜೈಲಿನಲ್ಲಿರುವ ಸಾಥು ಈ ಕೊಲೆಗೆ ಸಹಕಾರ ನೀಡಿರಬಹುದಾ ಎಂಬ ಪ್ರಶ್ನೆ ಈಗ ಮೂಡಿದೆ. ಜೈಲಿನಲ್ಲಿದ್ದರೂ ಸಹ ಮೊಬೈಲ್, ಗಾಂಜಾ ಎಲ್ಲವೂ ಸಾಥುಗೆ ಸಹಚರರಿಂದ ಲಭ್ಯವಾಗುತ್ತಿದೆ ಎನ್ನಲಾಗಿದ್ದು, ಇಂತಹ ಸಂದರ್ಭದಲ್ಲಿ ಕೊಲೆ ಕುರಿತು ಮಾತುಕತೆ ನಡೆದಿರಬಹುದು ಎನ್ನಲಾಗಿದೆ.
ಇನ್ನು ಶಿವಮೊಗ್ಗದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಶುಕ್ರವಾರದವರೆಗೂ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಮಾತ್ರ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಕಟ್ಟುನಿಟ್ಟಿನ ಎಚ್ಚರ ವಹಿಸಲಾಗಿದೆ.