ಬಗರ್ ಜಮೀನು ಸಾಗುವಳಿ ಮಾಡುತ್ತಿದ್ದವರಿಗೆ ಸರ್ಕಾರ ಈವರೆಗೆ ಹಕ್ಕು ಪತ್ರ ನೀಡುತ್ತಿತ್ತು. ಆದರೆ ಇನ್ನು ಮುಂದೆ ಈ ವ್ಯವಸ್ಥೆ ಇರುವುದಿಲ್ಲ. ಇದನ್ನು ಖುದ್ದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಗರ್ ಹುಕುಂ ಸಾಗುವಳಿ ಹೆಸರಿನಲ್ಲಿ ಸರ್ಕಾರಿ ಜಮೀನು ಕಬಳಿಕೆ ತಡೆಗಾಗಿ ಮುಂಬರುವ ಅಧಿವೇಶನದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲು ವಿಧೇಯಕ ಮಂಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದರಿಂದಾಗಿ ಸರ್ಕಾರಿ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸುವವರಿಗೆ ಮಾಲೀಕತ್ವದ ಹಕ್ಕು ನೀಡದೆ ಕೇವಲ ಗುತ್ತಿಗೆ ಆಧಾರದ ಮೇಲೆ ಭೂಮಿ ಮಂಜೂರು ಮಾಡಲಾಗುತ್ತದೆ. ಇದರಿಂದಾಗಿ ಸಾಗುವಳಿಯಾಗುತ್ತಿರುವ ಸರ್ಕಾರಿ ಜಮೀನಿನ ಮಾಲೀಕತ್ವ ಸರ್ಕಾರದ ಬಳಿಯೇ ಇರುತ್ತದೆ. ಜೊತೆಗೆ ಗುತ್ತಿಗೆ ನೀಡುವುದರಿಂದ ಆದಾಯವೂ ಬರುತ್ತದೆ ಎಂದು ತಿಳಿಸಿದ್ದಾರೆ.