ಬಹಳಷ್ಟು ದ್ವಿಚಕ್ರ ವಾಹನ ಸವಾರರು ಕೇವಲ ಪೊಲೀಸ್ ದಂಡದಿಂದ ತಪ್ಪಿಸಿಕೊಳ್ಳಬೇಕೆಂಬ ಕಾರಣಕ್ಕೆ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುತ್ತಾರೆ. ಇನ್ನೂ ಕೆಲವರು ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿದರೂ ಕೂಡ ಬಕಲ್ ಹಾಕಲು ನಿರ್ಲಕ್ಷ್ಯ ವಹಿಸುತ್ತಾರೆ. ಹೀಗೆ ಕಳಪೆ ಮಟ್ಟದ ಹಾಗೂ ಹೆಲ್ಮೆಟ್ ಧರಿಸಿಯೂ ಬಕಲ್ ಹಾಕದವರಿಗೆ ಶಾಕಿಂಗ್ ಸಂಗತಿಯೊಂದು ಇಲ್ಲಿದೆ.
ಹೌದು, ಇತ್ತೀಚೆಗೆ ನಡೆದ ಅಧ್ಯಯನ ಒಂದರಲ್ಲಿ ಅಪಘಾತದ ವೇಳೆ ತಲೆಗೆ ಪೆಟ್ಟಾಗಿ ಶೇಕಡಾ 70ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂಬ ಸಂಗತಿ ತಿಳಿದು ಬಂದಿದ್ದು, ಈ ಪೈಕಿ ಬಹಳಷ್ಟು ಸಾವುಗಳಿಗೆ ಹೆಲ್ಮೆಟ್ ನ ಬಕಲ್ ಲಾಕ್ ಮಾಡದೇ ಇರುವುದು ಕಾರಣ ಎಂಬ ಸಂಗತಿ ಬೆಳಕಿಗೆ ಬಂದಿದೆ. ಬಹುತೇಕ ಸವಾರರು ಹೆಲ್ಮೆಟ್ ಅನ್ನು ಕೇವಲ ತಲೆಗೆ ಸಿಗಿಸಿಕೊಂಡು ಬಕಲ್ ಲಾಕ್ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದು ಅಧ್ಯಯನದಲ್ಲಿ ಕಂಡುಬಂದಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕೆಆರ್ ಪುರಂ ಸಂಚಾರ ಠಾಣೆ ಪೊಲೀಸರು, ಈಸ್ಟ್ ಪಾಯಿಂಟ್ ಮೆಡಿಕಲ್ ಸೈನ್ಸ್ ಕಾಲೇಜಿನ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ನೆರವಿನೊಂದಿಗೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಸವಾರರ ಅಧ್ಯಯನ ನಡೆಸಲಾಗಿದ್ದು, ಈ ವೇಳೆ ಶೇ.52.3 ರಷ್ಟು ಮಂದಿ ಹೆಲ್ಮೆಟ್ ನ ಬಕಲ್ ಲಾಕ್ ಮಾಡಿದೆ ಇರುವುದು ಕಂಡು ಬಂದಿದೆ. ವಾಹನ ಚಾಲನೆ ವೇಳೆ ಶೇ.83 ರಷ್ಟು ಸವಾರರು ಹೆಲ್ಮೆಟ್ ಧರಿಸುತ್ತರಾದರೂ ಈ ಪೈಕಿ ಶೇಕಡ 52.3ರಷ್ಟು ಮಂದಿ ಹೆಲ್ಮೆಟ್ ಬಕಲ್ ಲಾಕ್ ಮಾಡುತ್ತಿಲ್ಲ. ಹೀಗಾಗಿ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವುದರ ಜೊತೆಗೆ ಬಕಲ್ ಲಾಕ್ ಮಾಡಿ ಅಪಘಾತದ ವೇಳೆ ಪ್ರಾಣಾಪಾಯದಿಂದ ಪಾರಾಗಿ ಎಂಬುದು ತಜ್ಞರ ಸಲಹೆಯಾಗಿದೆ.