alex Certify ಫ್ಲೈಓವರ್ ನಲ್ಲಿ ಸಿಲುಕಿದ ಪ್ರಧಾನಿ‌ ಮೋದಿ, ಗೃಹ ಸಚಿವಾಲಯದಿಂದ ಪಂಜಾಬ್ ಸರ್ಕಾರಕ್ಕೆ ತೀವ್ರ ತರಾಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲೈಓವರ್ ನಲ್ಲಿ ಸಿಲುಕಿದ ಪ್ರಧಾನಿ‌ ಮೋದಿ, ಗೃಹ ಸಚಿವಾಲಯದಿಂದ ಪಂಜಾಬ್ ಸರ್ಕಾರಕ್ಕೆ ತೀವ್ರ ತರಾಟೆ

ಬುಧವಾರ ಪಂಜಾಬ್‌ನಲ್ಲಿ ರಸ್ತೆ ಮೂಲಕ ಪ್ರಯಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ 15-20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲೆ ಸಿಲುಕಿಕೊಂಡರು. ಈ ಘಟನೆಯನ್ನು ಕೇಂದ್ರ ಗೃಹ ಸಚಿವಾಲಯವು ಪಂಜಾಬ್ ಪೊಲೀಸ್ ಹಾಗೂ ಭದ್ರತಾ ಇಲಾಖೆಯ ದೊಡ್ಡ ಲೋಪ ಎಂದಿದೆ‌.

ಪಂಜಾಬ್‌ನಲ್ಲಾದ ಈ ಘಟನೆ ನಂತರ ಪ್ರಧಾನಿಯವರ ಬೆಂಗಾವಲು ಪಡೆ ಹಿಂತಿರುಗಲು ನಿರ್ಧರಿಸಿದೆ ಎಂದು ಗೃಹ ಸಚಿವಾಲಯದ ಹೇಳಿಕೆಯಲ್ಲಿ ತಿಳಿದು ಬಂದಿದೆ‌. ಇದು ಪ್ರಧಾನಿಯವರ ಭದ್ರತೆಯಲ್ಲಾದ ಪ್ರಮುಖ ಲೋಪ ಎಂದಿರುವ ಗೃಹ ಇಲಾಖೆ, ಪಂಜಾಬ್ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದೆ.

ಘಟನೆಗೆ ಕಾರಣರಾದವರ ವಿರುದ್ಧ ಹಾಗೂ ಸಂಬಂಧಪಟ್ಟ ಇಲಾಖೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಂಜಾಬ್ ಸರ್ಕಾರಕ್ಕೆ ಆದೇಶ ಹೊರಡಿಸಿದೆ‌. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವಾಲಯ, ಘಟನೆಯ ಸಂಪೂರ್ಣ ವರದಿ ನೀಡುವಂತೆ ಪಂಜಾಬ್ ಸರ್ಕಾರಕ್ಕೆ ಆದೇಶ ನೀಡಿದೆ.

ಪ್ರಧಾನಿ ಮೋದಿಯವರ ಪಂಜಾಬ್ ಭೇಟಿಯ ಕುರಿತು ಗೃಹ ಸಚಿವಾಲಯ ಹೊರಡಿಸಿದ ಹೇಳಿಕೆ ಇಲ್ಲಿದೆ:

ಇಂದು ಬೆಳಿಗ್ಗೆ ಪ್ರಧಾನಿ ಅವರು ಹೆಲಿಕಾಪ್ಟರ್‌ನಲ್ಲಿ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಹೋಗಲು ಬಟಿಂಡಾಕ್ಕೆ ಬಂದಿಳಿದರು. ಮಳೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ, ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಹವಾಮಾನ ಸರಿಹೋಗಬಹುದೆಂದು ಪ್ರಧಾನಿ ಸುಮಾರು 20 ನಿಮಿಷಗಳ ಕಾಲ ಕಾದರು. ಹವಾಮಾನವು ಸುಧಾರಿಸದಿದ್ದಾಗ, ಅವರು ರಸ್ತೆ ಮೂಲಕ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಬೇಕೆಂದು ನಿರ್ಧರಿಸಲಾಯಿತು.

ಪ್ರಯಾಣ ಮತ್ತು ಭೇಟಿ ಕಾರ್ಯಕ್ರಮ 2 ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಿ, ಪಂಜಾಬ್ ಡಿಜಿಪಿ ಹಾಗೂ ಪೊಲೀಸರು ಎಲ್ಲಾ ಸರಿಯಾಗಿದೆ, ಎಂದು ದೃಢೀಕರಿಸಿಕೊಂಡ ನಂತರವೇ ಪ್ರಧಾನಿಯವರ ಪ್ರಯಾಣ ಶುರುವಾಯಿತು. ಪ್ರಧಾನಿಯವರ ಬೆಂಗಾವಲು ಪಡೆ, ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸುಮಾರು 30 ಕಿ.ಮೀ ದೂರದಲ್ಲಿ ಹುಸೇನಿವಾಲಾ ಮೇಲ್ಸೇತುವೆಯನ್ನು ತಲುಪಿದಾಗ ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ತಡೆದಿರುವುದು ಕಂಡುಬಂದಿದೆ.

ಇದರಿಂದ ಪ್ರಧಾನಿ 15-20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ ಸಿಲುಕಿಕೊಂಡರು. ಇದು ಪ್ರಧಾನಿಯವರ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ. ಪ್ರಧಾನಿಯವರ ವೇಳಾಪಟ್ಟಿ ಮತ್ತು ಪ್ರಯಾಣದ ಸಂಪೂರ್ಣ ಮಾಹಿತಿಯನ್ನ ಪಂಜಾಬ್ ಸರ್ಕಾರಕ್ಕೆ ಮುಂಚಿತವಾಗಿ ತಿಳಿಸಲಾಗಿತ್ತು. ಲಾಜಿಸ್ಟಿಕ್ಸ್, ಭದ್ರತೆಯ ಅಗತ್ಯ ವ್ಯವಸ್ಥೆ, ಹಾಗೂ ತ್ವರಿತ ನಿರ್ಧಾರಗಳು, ಆಕಸ್ಮಿಕ ಯೋಜನೆಗಳಿಗೆ ಪಂಜಾಬ್ ಸರ್ಕಾರ ಸಿದ್ಧವಾಗಿರಬೇಕಿತ್ತು. ಪ್ರಧಾನಿಯವರು ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದಾರೆ ಎಂದರೆ ಸರಿಯಾದ ಮತ್ತು ಹೆಚ್ಚುವರಿ ಭದ್ರತೆ ನಿಯೋಜಿಸಬೇಕು, ಆದರೆ ಇಲ್ಲಿ ಅದು ಸ್ಪಷ್ಟವಾಗಿ ಆಗಿಲ್ಲ. ಈ ಭದ್ರತಾ ಲೋಪದ ನಂತರ, ಪ್ರಧಾನಿ ಹಾಗೂ ಅವರ ಬೆಂಗಾವಲು ಪಡೆ ಬಟಿಂಡಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಲು ನಿರ್ಧರಿಸಲಾಯಿತು ಎಂದು ಗೃಹ ಇಲಾಖೆ ತಿಳಿಸಿದೆ‌.

ಈ ಘಟನೆಯ ನಂತರ ಪ್ರಧಾನಿಯವರ ಪಂಜಾಬ್ ವಿಸಿಟ್ ಕಡಿತಗೊಂಡಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಪ್ರಧಾನಿಯವರ ಪಂಜಾಬ್ ಕಾರ್ಯಕ್ರಮ ರದ್ಧಾಗಿರುವುದು ವಿಷಾದಕರ. ಅವರು ಇಂದಿನ ಕಾರ್ಯಕ್ರಮದಲ್ಲಿ ಪಂಜಾಬ್ ಅಭಿವೃದ್ಧಿಗಾಗಿ ಹಲವು ಪ್ಯಾಕೇಜ್ ಗಳನ್ನ ಘೋಷಿಸಲಿದ್ದರು ಎಂದಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...