ಸಾಮಾಜಿಕ ಜಾಲತಾಣಗಳು ಎಷ್ಟು ಅನುಕೂಲಕರವೋ ಇದರಿಂದ ಅಷ್ಟೇ ಅನಾನುಕೂಲವೂ ಇದೆ. ಇದನ್ನು ಸೂಕ್ತವಾಗಿ ಬಳಸಿಕೊಂಡರೆ ಒಳ್ಳೆಯದು. ಆದರೆ ಇಂತಹ ಜಾಲತಾಣಗಳಲ್ಲಿ ಪರಿಚಿತರರಾಗುವವರನ್ನು ನಂಬುವ ಮುನ್ನ ಸಾಕಷ್ಟು ಬಾರಿ ಯೋಚಿಸಬೇಕಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಫೇಸ್ಬುಕ್ನಲ್ಲಿ ಪರಿಚಯವಾದ ಯುವತಿಯನ್ನು ನಂಬಿ ಯುವಕನೊಬ್ಬ ಸರಿ ಸುಮಾರು 4 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾನೆ.
ಇಂತಹ ಒಂದು ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸಕ್ರಿಯನಾಗಿದ್ದ ಯುವಕನಿಗೆ ದಾವಣಗೆರೆ ಮೂಲದ ಯುವತಿ ಪರಿಚಯವಾಗಿದ್ದಾಳೆ. ಕೆಲ ದಿನ ಬಳಿಕ ಇಬ್ಬರೂ ಆತ್ಮೀಯರಾಗಿದ್ದು, ಒಟ್ಟಿಗೆ ಹಲವು ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ತಮ್ಮಿಬ್ಬರ ಸ್ನೇಹವನ್ನು ದುರ್ಬಳಕೆ ಮಾಡಿಕೊಂಡ ಯುವತಿ, ವಿವಿಧ ಸಂದರ್ಭಗಳಲ್ಲಿ ಯುವಕನಿಂದ ಅಂದಾಜು ನಾಲ್ಕು ಲಕ್ಷ ರೂಪಾಯಿಗಳನ್ನು ಪಡೆದಿದ್ದಾಳೆ.
ಆದರೆ ಆ ಬಳಿಕ ಯುವತಿ ಹಣ ಕೊಡಲು ಸತಾಯಿಸಿದ್ದು, ಇದರಿಂದ ಬೇಸತ್ತ ಯುವಕ ಪೊಲೀಸರಿಗೆ ದೂರು ನೀಡಿದ್ದ. ಆಕೆಯನ್ನು ಕರೆಸಿಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು ಬಳಿಕ ಬಿಟ್ಟು ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಯುವಕ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.