ಸಾಮಾಜಿಕ ಜಾಲತಾಣಗಳು ಎಷ್ಟು ಉಪಯುಕ್ತವೋ ಅಷ್ಟೇ ದುರ್ಬಳಕೆಯೂ ಇರುತ್ತದೆ. ಅದರಲ್ಲೂ ಕೆಲವರು ಪರಸ್ಪರ ಭೇಟಿಯಾಗದಿದ್ದರೂ ಸಹ ಪ್ರೀತಿಯಲ್ಲಿ ಬಿದ್ದು ತಮ್ಮ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಾರೆ. ಇಲ್ಲೊಂದು ಪ್ರಕರಣದಲ್ಲಿ ಇದೇ ರೀತಿ ಆಗುತ್ತಿದ್ದದ್ದು ಅದೃಷ್ಟವಶಾತ್ ಹಿರಿಯರ ಸಮಯ ಪ್ರಜ್ಞೆಯಿಂದ ಸುಖಾಂತ್ಯ ಕಂಡಿದೆ.
ಇಂತದೊಂದು ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಗ್ರಾಮ ಒಂದರಲ್ಲಿ ನಡೆದಿದ್ದು, ಗ್ರಾಮದ ಯುವತಿ ತನಗೆ ಫೇಸ್ಬುಕ್ ನಲ್ಲಿ ನಾಲ್ಕು ವರ್ಷದ ಹಿಂದೆ ಪರಿಚಯವಾಗಿದ್ದ ಪ್ರದೀಪ್ ಎಂಬಾತನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಪರಸ್ಪರ ಫೋನ್ ಮೂಲಕ ಮಾತನಾಡುತ್ತಿದ್ದು, ಆತ ತನ್ನನ್ನು ತಾನು ಸಿವಿಲ್ ಇಂಜಿನಿಯರ್ ಎಂದು ಪರಿಚಯಿಸಿಕೊಂಡಿದ್ದ.
ಪ್ರದೀಪ್ ಹೆಸರಿನ ವ್ಯಕ್ತಿಯ ಪ್ರೀತಿಯ ಜಾಲಕ್ಕೆ ಬಿದ್ದಿದ್ದ ಯುವತಿ, ಮನೆಯವರ ಬುದ್ಧಿ ಮಾತುಗಳಿಗೆ ಕಿವಿಗೊಡುತ್ತಿರಲಿಲ್ಲ. ಕಡೆಗೆ ಈ ವಿಷಯ ಯುವತಿಯ ತಾಯಿ ಮೂಲಕ ವಕೀಲೆಯೊಬ್ಬರ ಕಿವಿಗೆ ಬಿದ್ದಿದೆ. ಅವರು ಕೂಡ ಆಕೆಯನ್ನು ಕರೆಸಿಕೊಂಡು ಮನವೊಲಿಸಲು ಪ್ರಯತ್ನಿಸಿದರು ಸಾಧ್ಯವಾಗಿಲ್ಲ.
ಕಡೆಗೆ ಪ್ರದೀಪನ ಮೂಲ ಪತ್ತೆ ಹಚ್ಚಲು ವಕೀಲೆ ಮುಂದಾಗಿದ್ದು ಇದಕ್ಕಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಉಡುಪಿ ಜಿಲ್ಲೆ ಶಂಕರನಾರಾಯಣ ಪೊಲೀಸರ ಸಹಕಾರದೊಂದಿಗೆ ಪ್ರದೀಪನ ಸಿದ್ದಾಪುರದ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ರದೀಪ್ ಎಂಬಾತನ ಹೆಸರಿನಲ್ಲಿ ಯುವತಿ ಜೊತೆ ಮಾತನಾಡುತ್ತಿದ್ದಿದ್ದು ಜ್ಯೋತಿ ಎಂಬ ಹೆಸರಿನ ಮಂಗಳಮುಖಿ ಎಂಬ ಶಾಕಿಂಗ್ ಸಂಗತಿ ಬಯಲಾಗಿದೆ.