ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಒಂದು ಪ್ರಮುಖ ಘಟ್ಟ. ಉತ್ತಮ ಅಂಕ ಗಳಿಸಬೇಕೆಂಬ ಕಾರಣಕ್ಕೆ ವರ್ಷಪೂರ್ತಿ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳಿಗೆ ಮೌಲ್ಯಮಾಪನದ ವೇಳೆ ಒಂದಷ್ಟು ಎಡವಟ್ಟಾದರೂ ಅಪಾರ ನಷ್ಟ. ಅಂತವುದೇ ಒಂದು ಉದಾಹರಣೆ ಇಲ್ಲಿದೆ.
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶಿಕಾರಿಪುರದ ಅಕ್ಷರ ಕಾಲೇಜಿನ ವಿದ್ಯಾರ್ಥಿನಿ ವರ್ಷಾ, ಪ್ರಥಮ ಭಾಷೆ ಕನ್ನಡದಲ್ಲಿ 95, ಗಣಿತದಲ್ಲಿ 92, ಜೀವಶಾಸ್ತ್ರ 98, ರಸಾಯನ ಶಾಸ್ತ್ರ 86 ಹಾಗೂ ಭೌತಶಾಸ್ತ್ರದಲ್ಲಿ 97 ಅಂಕ ಪಡೆದಿದ್ದು, ಆದರೆ ಇಂಗ್ಲೀಷ್ ನಲ್ಲಿ ಮಾತ್ರ ಕೇವಲ 12 ಅಂಕ ಪಡೆದು ಫೇಲ್ ಆಗಿದ್ದರು.
ಆದರೆ ಇಂಗ್ಲೀಷ್ ನಲ್ಲಿ ಉತ್ತಮ ಅಂಕ ಬರುವ ನಿರೀಕ್ಷೆ ಇದ್ದ ಕಾರಣ ವರ್ಷಾ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಇದೀಗ ಆಕೆಗೆ ಒಟ್ಟು 94 ಅಂಕ ಲಭಿಸಿದೆ. ಹೀಗಾಗಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದು, ಈ ವಿದ್ಯಾರ್ಥಿನಿ ಹೊಳೆಹೊನ್ನೂರು ಸಮೀಪದ ಇಟ್ಟಿಗೆಹಳ್ಳಿಯ ಯೋಗೇಶ್ ಹಾಗೂ ಜಯಲಕ್ಷ್ಮಿ ದಂಪತಿಯ ಪುತ್ರಿ.