ಹಾವೇರಿ: ಬಾಲಕನಿಗೆ ಪೂರ್ತಿ ಟಿಕೆಟ್ ತೆಗೆದುಕೊಳ್ಳಿ ಎಂದು ಹೇಳಿದ್ದಕ್ಕೆ ಬಸ್ ಚಾಲಕ ಹಾಗೂ ನಿರ್ವಾಹಕರ ಮೇಲೆಯೇ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾರಿಗೆ ಸಂಸ್ಥೆಯ ಬಸ್ ಹುಬ್ಬಳ್ಳಿಯಿಂದ ಹಾನಗಲ್ ಗೆ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಬಾಲಕನೊಂದಿಗೆ ಬಸ್ ಹತ್ತಿದ್ದಾರೆ. ಟಿಕೆಟ್ ಪಡೆಯುವ ಸಂದರ್ಭದಲ್ಲಿ ನಿರ್ವಾಹಕ, ಬಾಲಕನಿಗೂ ಪೂರ್ತಿ ಟಿಕೆಟ್ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಇದಕ್ಕೆ ಮಹಿಳೆ ಒಪ್ಪದೆ ನಿರ್ವಾಹಕರೊಂದಿಗೆ ಜಗಳವಾಡಿದ್ದಾರೆ ಎನ್ನಲಾಗಿದೆ.
ನಂತರ ಹಾನಗಲ್ ಬರುತ್ತಿದ್ದಂತೆ, ಮಹಿಳೆಯು ತಮ್ಮ ಕಡೆಯವರನ್ನು ಕರೆಯಿಸಿದ್ದಾರೆ. ಆಗ ಅವರೆಲ್ಲರೂ ಸೇರಿಕೊಂಡು ನಿರ್ವಾಹಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದನ್ನು ತಡೆಯಲು ಚಾಲಕ ಆಗಮಿಸಿದ್ದಾರೆ. ಆಗ ಅವರ ಮೇಲೆಯೂ ಹಲ್ಲೆ ಮಾಡಲಾಗಿದೆ.
ಇದನ್ನು ನೋಡುತ್ತಿದ್ದಂತೆ ನಿಲ್ದಾಣದಲ್ಲಿದ್ದ ಇನ್ನಿತರ ಚಾಲಕರು, ನಿರ್ವಾಹಕರು ಹಾಗೂ ಸಾರಿಗೆ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಆಗ ಹಲ್ಲೆ ಮಾಡಿದವರು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸುಮಾರು 6 ಜನ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಚಾಲಕ ಶಿವಾನಂದ ಹಾಗೂ ನಿರ್ವಾಹಕ ವೀರಪ್ಪ ಹಲ್ಲೆಗೊಳಗಾದವರು. ಘಟನೆಯಲ್ಲಿ ಚಾಲಕ ಶಿವಾನಂದ ಹೊಟ್ಟೆಗೆ ಪೆಟ್ಟು ಬಿದ್ದಿದ್ದರಿಂದಾಗಿ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ನಂತರ ಹಲ್ಲೆ ಖಂಡಿಸಿ ಸಾರಿಗೆ ಸಿಬ್ಬಂದಿ ಹಾನಗಲ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.