ಚೀನಾ ದೇಶದ ರಾಷ್ಟ್ರೀಯ ತಂಡದಲ್ಲಿ ಆಡುವ ಫುಟ್ಬಾಲ್ ಆಟಗಾರರಿಗೆ ಟ್ಯಾಟೂ ಹಾಕಿಸಿಕೊಳ್ಳುವುದನ್ನು ನಿರ್ಬಂಧಿಸಿದೆ. ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಸ್ಪೋರ್ಟ್ ಆಫ್ ಚೀನಾ (GAS) ಈ ನಿರ್ದೇಶನವನ್ನು ಹೊರಡಿಸಿದ್ದು ಈಗಾಗಲೇ ಟ್ಯಾಟೂವನ್ನು ಹೊಂದಿರುವ ಆಟಗಾರರು ಅದನ್ನು ತೆಗೆಸಬೇಕು ಅಥವಾ ಅದನ್ನು ಮುಚ್ಚಿಕೊಳ್ಳಬೇಕು ಎಂದು ಹೇಳಿದೆ.
ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಸ್ಪೋರ್ಟ್ಸ್ ಆಫ್ ಚೀನಾ ಹೊರಡಿಸಿರುವ ಈ ನಿರ್ದೇಶನವು ಚೀನಿ ಸಮಾಜಕ್ಕೆ ಉತ್ತಮ ಉದಾಹರಣೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ರಾಷ್ಟ್ರೀಯ ತಂಡ ಹಾಗೂ ಅಂಡರ್ 23 ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರರಿಗೆ ಹೊಸದಾಗಿ ಟ್ಯಾಟುಗಳನ್ನು ಹಾಕಿಸಿಕೊಳ್ಳುವುದಕ್ಕೆ ನಿರ್ದಿಷ್ಟವಾಗಿ ನಿರ್ಬಂಧ ಹೇರಲಾಗಿದೆ. ಈಗಾಗಲೇ ಟ್ಯಾಟೂ ಹೊಂದಿರುವವರು ಅದನ್ನು ತೆಗೆಸಬೇಕು ಅಥವಾ ಮುಚ್ಚಿಕೊಳ್ಳಬೇಕು ಎಂದು ಗ್ಯಾಸ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ತರಬೇತಿ ಹಾಗೂ ಪಂದ್ಯಗಳ ಸಮಯದಲ್ಲಿ ಈಗಾಗಲೇ ಇರುವ ಹಚ್ಚೆಯನ್ನು ಮುಚ್ಚಿಕೊಳ್ಳಬೇಕು ಎಂದೂ ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಸ್ಪೋರ್ಟ್ ಆಫ್ ಚೀನಾ ಹೇಳಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ರಾಷ್ಟ್ರೀಯ ತಂಡಗಳಲ್ಲಿ ದೇಶಭಕ್ತಿಯ ಶಿಕ್ಷಣವನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಸ್ಪೋರ್ಟ್ಸ್ ಆಫ್ ಚೀನಾ ಹೇಳಿದೆ.