
ಬ್ರೆಜಿಲಿಯನ್ ಫುಟ್ಬಾಲ್ ಸ್ಟೇಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಪೊಲೀಸ್ ನಾಯಿಯೊಂದು ಮೈದಾನಕ್ಕೆ ಪ್ರವೇಶಿಸಿದೆ. ಇದು ಕೆಲವೇ ನಿಮಿಷ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದೆ. 2022ರ ಕ್ಯಾಂಪಿಯೊನಾಟೊ ಪೆರ್ನಾಂಬುಕಾನೊ 2022ರ ಫೈನಲ್ನಲ್ಲಿ ಜರ್ಮನ್ ಶೆಫರ್ಡ್ ಶ್ವಾನವು ಆಟಗಾರರೊಂದಿಗೆ ತನ್ನ ಆಟವನ್ನಾಡಿದೆ. ಕೆಲವು ಸಮಯದವರೆಗೆ ಈ ನಾಯಿಯು ಮೋಜಿನ ಆಟವಾಡಿದ್ದು, ಮೈದಾನದುದ್ದಕ್ಕೂ ಬಾಲ್ ಅನ್ನು ಬಾಯಿಯಲ್ಲಿ ಕಚ್ಚಿ ಓಡಾಡಿದೆ.
ಆಟಗಾರರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದ ಆಟದ ದ್ವಿತೀಯಾರ್ಧದಲ್ಲಿ, ಈ ಶ್ವಾನ ಮೈದಾನವನ್ನು ಪ್ರವೇಶಿಸಿದೆ. ಮೈದಾನದ ಉದ್ದಗಲಕ್ಕೂ ಆಟಗಾರರು ಓಡುವಂತೆ ಓಟಕ್ಕಿತ್ತಿದೆ. ಮೊದಲಿಗೆ ಕ್ರೀಡಾಪಟುಗಳು ಸ್ವಲ್ಪ ಗೊಂದಲಕ್ಕೊಳಗಾದರು ನಂತರ, ಕೆಲವು ಆಟಗಾರರು ನಾಯಿಯನ್ನು ಹೊರಹಾಕಲು ಪ್ರಯತ್ನಿಸಿದ್ದಾರೆ. ಆದರೆ, ಅವರ ಪ್ರಯತ್ನ ಫಲಿಸಲಿಲ್ಲ.
ಶೀಘ್ರದಲ್ಲೇ, ನಾಯಿಯು ಫುಟ್ಬಾಲ್ ಚೆಂಡನ್ನು ಬಾಯಿಯಲ್ಲಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮೈದಾನದುದ್ದಕ್ಕೂ ಉತ್ಸಾಹದಿಂದ ಓಡಿದೆ. ಕೊನೆಗೆ ಪೊಲೀಸ್ ಸಿಬ್ಬಂದಿ ಮತ್ತೊಂದು ಫುಟ್ಬಾಲ್ ಅನ್ನು ನಾಯಿಗೆ ನೀಡಿದ್ದು, ಅದರ ಬೆನ್ನನ್ನು ತಟ್ಟಿ ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಪ್ರೇಕ್ಷಕರ ಮುಗಿಲುಮುಟ್ಟುವ ಚಪ್ಪಾಳೆಯೊಂದಿಗೆ ಶ್ವಾನ ಹಾಗೂ ಸಿಬ್ಬಂದಿ ಮೈದಾನದಿಂದ ಹೊರನಡೆದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ, ಕೆಲವರು ನಾಯಿಯನ್ನು ಪಂದ್ಯದ ನಿಜವಾದ ಆಟಗಾರ ಎಂದು ಕರೆದಿದ್ದಾರೆ. ಏಕೆಂದರೆ, ಅದು ತಪ್ಪಿಸಿಕೊಳ್ಳುತ್ತಾ ಓಡಿರೋ ದೃಶ್ಯ ಆನ್ಲೈನ್ನಲ್ಲಿ ಅನೇಕ ಮೇಮ್ಗಳು ಮತ್ತು ಜೋಕ್ಗಳನ್ನು ಹುಟ್ಟುಹಾಕಿದೆ. ಅದೇನೇ ಇದ್ದರೂ, ಈ ವಿಡಿಯೋ ಪ್ರಪಂಚದಾದ್ಯಂತ ವೈರಲ್ ಆಗಿದ್ದು, ಶ್ವಾನ ಪ್ರೇಮಿಗಳು ಮತ್ತು ಕ್ರೀಡಾಭಿಮಾನಿಗಳನ್ನು ರಂಜಿಸಿದೆ.