ವಿರಾಟ್ ಕೊಹ್ಲಿ ಬಹಳ ಸಮಯದಿಂದ ಕಳಪೆ ಫಾರ್ಮ್‌ನಲ್ಲಿದ್ದಾರೆ. ಕಳೆದ ಮೂರು ವರ್ಷಗಳಿಂದ ವಿರಾಟ್ ಬ್ಯಾಟ್‌ನಿಂದ ಶತಕವೇ ಬಂದಿಲ್ಲ. ಕೊಹ್ಲಿಯನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ಕೂಡ ಚರ್ಚೆ ಆರಂಭವಾಗಿದೆ. ಮೈದಾನದಲ್ಲಿ ಕೊಹ್ಲಿ ಬ್ಯಾಟಿಂಗ್ ಕೊಂಚ ಮಂಕಾಗಿರಬಹುದು, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿ ಬಳಗವೇ ಇದೆ.
33ರ ಹರೆಯದ ಕೊಹ್ಲಿ ಸಾಮಾಜಿಕ ಮಾಧ್ಯಮದ ಸೆಲೆಬ್ರಿಟಿಯಾಗಿ ಪ್ರಾಬಲ್ಯ ಹೊಂದಿದ್ದಾರೆ. ಏಷ್ಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಕೊಹ್ಲಿ. ವಿರಾಟ್ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ 8 ಕೋಟಿ ರೂಪಾಯಿ ಪಡೆಯುತ್ತಾರೆ.
ಗಳಿಕೆಯಲ್ಲಿ ನಂಬರ್ ಒನ್…!
ವಿರಾಟ್ ಕೊಹ್ಲಿ ಏಷ್ಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ. hopperhq.com ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ವಿರಾಟ್ ಕೊಹ್ಲಿ 14ನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಹೆಸರೂ ಸೇರಿದೆ. ವಿರಾಟ್ ಕೊಹ್ಲಿ ಟಾಪ್ 15ರಲ್ಲಿರುವ ಏಕೈಕ ಭಾರತೀಯ. ಈ ಪಟ್ಟಿಯಲ್ಲಿ ವಿಶ್ವದ ದಿಗ್ಗಜ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ.
ಕೊಹ್ಲಿಗೆ ಇದ್ದಾರೆ 200 ಮಿಲಿಯನ್ ಫಾಲೋವರ್ಸ್
ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 200 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇಷ್ಟೊಂದು ಅನುಯಾಯಿಗಳನ್ನು ಹೊಂದಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ವರ್ಷ 100 ಮಿಲಿಯನ್ ಫಾಲೋವರ್ಸ್ ಹೊಂದಿದ ಮೊದಲ ಭಾರತೀಯ ಎನಿಸಿಕೊಂಡಿದ್ದರು. ಕ್ರಿಸ್ಟಿಯಾನೊ ರೊನಾಲ್ಡೊಗೆ 451 ಮಿಲಿಯನ್ ಫಾಲೋವರ್‌ಗಳಿದ್ರೆ, ಕೈಲಿ ಜೆನ್ನರ್ 345 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಲಿಯೋನೆಲ್ ಮೆಸ್ಸಿಗೆ 327 ಮಿಲಿಯನ್ ಫಾಲೋವರ್ಸ್ ಇದ್ದರೆ, ಸೆಲೆನಾ ಗೋಮ್ಸ್ 325 ಮಿಲಿಯನ್ ಅನುಯಾಯಿಗಳನ್ನು ಸಂಪಾದಿಸಿದ್ದಾರೆ. ಡ್ವೇನ್ ಜಾನ್ಸನ್ 320 ಫಾಲೋವರ್ಸ್ ಸಂಪಾದಿಸಿದ್ದಾರೆ.
ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಕಿಂಗ್ ಆಗಿ ಮೆರೆಯುತ್ತಿದ್ದಾರೆ. ಕೊಹ್ಲಿ ಕ್ರಿಕೆಟ್ ಪ್ರಿಯರ ಆಲ್‌ಟೈಮ್ ಫೇವರಿಟ್. ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಕೊಹ್ಲಿ ಏಕಾಂಗಿಯಾಗಿ ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಆದಷ್ಟು ಬೇಗ ಕೊಹ್ಲಿ ಫಾರ್ಮ್‌ಗೆ ಮರಳಲಿ ಅನ್ನೋದು ಅಭಿಮಾನಿಗಳ ಹಾರೈಕೆ.