ಫಾರ್ಮುಲಾ ಒನ್ ರೇಸ್ ಅಂದ್ರೆ ಸಾಕು ಕ್ರೀಡಾಪ್ರಿಯರಂತೂ ತುದಿಗಾಲಲ್ಲಿ ನಿಲ್ತಾರೆ. ಅಷ್ಟು ರೋಮಾಂಚನಕಾರಿ ಕ್ರೀಡೆ ಇದು. ಭಾರತ ಕೂಡ 2023ರಿಂದ ನವದೆಹಲಿಯ ಬುದ್ಧ ಇಂಟರ್ ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ಮೋಟೋ-ಜಿಪಿ ರೇಸ್ ಆಯೋಜಿಸಲಿದೆ. ಈ ಬಗ್ಗೆ ಸಂಘಟಕರು ಅಧಿಕೃತ ಮಾಹಿತಿ ನೀಡಿದ್ದಾರೆ.
ಕಮರ್ಷಿಯಲ್ ರೈಟ್ಸ್ ಪಡೆದಿರುವ ಡೋರ್ನಾ ಸ್ಪೋರ್ಟ್ಸ್ ಈ ಕುರಿತಂತೆ ಉತ್ತರ ಪ್ರದೇಶ ಸರ್ಕಾರ ಮತ್ತು ಕೇಂದ್ರದ ಕ್ರೀಡಾ ಸಚಿವಾಲಯದೊಂದಿಗೆ ಮಾತುಕತೆ ನಡೆಸಿದೆ. ಭಾರತದಲ್ಲಿ ಫಾರ್ಮುಲಾ ವನ್ ಅಭಿಮಾನಿಗಳು ಸಾಕಷ್ಟಿದ್ದಾರೆ. ಹಾಗಾಗಿ ಅವರಿಗಾಗಿಯೇ ಮೋಟೋ ಜಿಪಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ ಅಂತಾ ಡೋರ್ನಾ ಸ್ಪೋರ್ಟ್ಸ್ನ ಸಿಇಒ ಕಾರ್ಮೆಲೊ ಎಜ್ಪೆಲೆಟಾ ತಿಳಿಸಿದ್ದಾರೆ.
ಭಾರತ ಮೋಟಾರ್‌ಸೈಕಲ್ ಉದ್ಯಮಕ್ಕೆ ಪ್ರಮುಖ ಮಾರುಕಟ್ಟೆಯಾಗಿದೆ. ದ್ವಿಚಕ್ರ ವಾಹನಗಳ ಮಾರುಕಟ್ಟೆಯನ್ನು ಮತ್ತಷ್ಟು ಹುರಿದುಂಬಿಸಲು ಈ ರೇಸ್ ನೆರವಾಗಲಿದೆ ಎಂಬ ನಿರೀಕ್ಷೆಯಿದೆ. ನವದೆಹಲಿಯ ಹೊರವಲಯದಲ್ಲಿರುವ 5.14 ಕಿಮೀ ಟ್ರ್ಯಾಕ್ನಲ್ಲಿ 2011-13ರಲ್ಲಿ ಫಾರ್ಮುಲಾ ವನ್ ರೇಸ್ ನಡೆದಿತ್ತು. ಈ ವಾರದ ಆರಂಭದಲ್ಲಿ MotoGP 2023 ರಿಂದ ಕಝಾಕಿಸ್ತಾನ್‌ನ ಸೊಕೊಲ್ ಇಂಟರ್ನ್ಯಾಷನಲ್ ರೇಸ್‌ಟ್ರಾಕ್‌ನಲ್ಲಿ ರೇಸ್‌ಗಳನ್ನು ನಡೆಸಲು ಐದು ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿದೆ. MotoGP 2023ರ ಮಾರ್ಚ್ 24-26 ರಿಂದ ಪೋರ್ಟಿಮಾವೊದಲ್ಲಿನ ಪೋರ್ಚುಗಲ್‌ನ ಅಲ್ಗಾರ್ವ್ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ರೇಸ್ ಪ್ರಾರಂಭವಾಗಲಿದೆ.