ಇದು ಫಟಾ ಫಟ್ ಅಂತಾ ಮಾಡಬಹುದಾದ ರೆಸಿಪಿ.
ರಾತ್ರಿ ಉಳಿದ ಅನ್ನದಲ್ಲೂ ಇನ್ ಸ್ಟಂಟ್ ವೆಜ್ ಬಿರಿಯಾನಿ ಮಾಡಬಹುದು. ತರಕಾರಿಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಂಡ್ರೆ ಬಹಳ ಬೇಗ ಇದನ್ನು ಮಾಡಬಹುದು. ಬಾಸುಮತಿ ಅಕ್ಕಿ ಇದ್ರೆ ವೆಜ್ ಬಿರಿಯಾನಿಗೆ ಇನ್ನೂ ಚೆನ್ನ.
ಬೇಕಾಗುವ ಸಾಮಗ್ರಿ : ಒಂದು ಚಮಚ ತುಪ್ಪ, 1 ಲವಂಗದ ಎಲೆ, ಕಾಲು ಚಮಚ ಜೀರಿಗೆ, ಒಂದು ಇಂಚಿನಷ್ಟು ದಾಲ್ಚಿನಿ, 1 ನಕ್ಷತ್ರ ಸೋಂಪು, ಅರ್ಧ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ, ಹೆಚ್ಚಿದ ಅರ್ಧ ಕ್ಯಾರೆಟ್, ಒಂದು ಕಪ್ ನಷ್ಟು ಹೆಚ್ಚಿದ ಗೋಬಿ, ಹೆಚ್ಚಿದ ಕಾಲು ಭಾಗ ಆಲೂಗಡ್ಡೆ, ಹೆಚ್ಚಿದ ಅರ್ಧ ಕ್ಯಾಪ್ಸಿಕಂ, ಹೆಚ್ಚಿದ 3 ಬೀನ್ಸ್, ಕಾಲು ಕಪ್ ಮೊಸರು, ಅರ್ಧ ಚಮಚ ಅಚ್ಚಖಾರದ ಪುಡಿ, 1 ಚಮಚ ಬಿರಿಯಾನಿ ಮಸಾಲಾ ಪುಡಿ, ಹೆಚ್ಚಿದ ಪುದೀನಾ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೇಯಿಸಿಟ್ಟ 2 ಕಪ್ ಬಾಸುಮತಿ ಅನ್ನ.
ಮಾಡುವ ವಿಧಾನ : ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ. ಅದು ಬಿಸಿಯಾದ ಬಳಿಕ 1 ಲವಂಗದ ಎಲೆ, ಜೀರಿಗೆ, ದಾಲ್ಚಿನಿ, ನಕ್ಷತ್ರ ಸೋಂಪು ಹಾಕಿ. ಅದು ಸ್ವಲ್ಪ ಕೆಂಪಗಾದ ಬಳಿಕ ಹೆಚ್ಚಿದ ಈರುಳ್ಳಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ತಿರುವಿ. ನಂತರ ಕ್ಯಾರೆಟ್, ಗೋಬಿ, ಆಲೂಗಡ್ಡೆ, ಕ್ಯಾಪ್ಸಿಕಂ, ಬೀನ್ಸ್ ಹಾಕಿ ಮಿಕ್ಸ್ ಮಾಡಿ.
ತರಕಾರಿ ಬೆಂದ ನಂತರ ಮೊಸರು, ಅಚ್ಚಖಾರದ ಪುಡಿ, ಬಿರಿಯಾನಿ ಮಸಾಲಾ ಪುಡಿ, ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಸ್ವಲ್ಪ ಹೊತ್ತು ಹಾಗೇ ಬೇಯಲು ಬಿಡಿ. ಮಸಾಲಾ ಎಣ್ಣೆ ಬಿಡಲು ಆರಂಭಿಸುತ್ತಿದ್ದಂತೆ ಬೇಯಿಸಿ ಇಟ್ಟುಕೊಂಡ ಅನ್ನ ಹಾಕಿ ನಿಧಾನವಾಗಿ ಬೆರೆಸಿ. ಹೆಚ್ಚಿದ ಪುದೀನಾ, ಕೊತ್ತಂಬರಿ ಸೊಪ್ಪನ್ನೂ ಹಾಕಿ ಮಿಕ್ಸ್ ಮಾಡಿ. ಈರುಳ್ಳಿ-ಟೊಮೆಟೋ ಮೊಸರು ಬಜ್ಜಿ ಜೊತೆಗೆ ಸವಿಯಿರಿ.