ಬೆಳ್ಳುಳ್ಳಿ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಪುರುಷರಿಗೆ ಬೆಳ್ಳುಳ್ಳಿ ಸೇವನೆಯಿಂದ ಅನುಕೂಲವಾಗಲಿದೆ ಅನ್ನೋದು ನಿಮಗೆಲ್ಲ ಗೊತ್ತಿರಬಹುದು. ಸೋಂಕಿನ ಅಪಾಯ ಕಡಿಮೆ ಮಾಡುವುದರಿಂದ ಹಿಡಿದು ತೂಕ ಕಡಿಮೆ ಮಾಡುವವರೆಗೂ ಹಲವು ಬಗೆಯ ಲಾಭಗಳು ಬೆಳ್ಳುಳ್ಳಿಯಲ್ಲಿವೆ. ತೂಕ ಕಡಿಮೆ ಮಾಡಿಕೊಳ್ಳಲು ನೀವು ಕೂಡ ಒಮ್ಮೆ ಬೆಳ್ಳುಳ್ಳಿ ನೀರನ್ನು ಕುಡಿದು ನೋಡಿ.
ಹೊಟ್ಟೆಯ ಬೊಜ್ಜನ್ನು ಕರಗಿಸುವ ಸಾಮರ್ಥ್ಯ ಬೆಳ್ಳುಳ್ಳಿಗಿದೆ. ಇದಲ್ಲದೆ ರಕ್ತದೊತ್ತಡವನ್ನು ನಿಯಂತ್ರಿಸಲು ಬೆಳ್ಳುಳ್ಳಿ ನೀರು ಸಹಾಯಕವಾಗಿದೆ. ಮಲಬದ್ಧತೆ ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ಕೂಡ ಬೆಳ್ಳುಳ್ಳಿಯೇ ಮದ್ದು. ಬೆಳ್ಳುಳ್ಳಿ ನೀರು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದಂತೆ. ಆಗ ಸಹಜವಾಗಿಯೇ ಕಡಿಮೆ ಆಹಾರ ಸೇವನೆ ಮಾಡುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ.
ಬೆಳ್ಳುಳ್ಳಿ ನೀರನ್ನು ತಯಾರಿಸಲು ಒಂದು ಪಾತ್ರೆಯಲ್ಲಿ ಒಂದು ಲೋಟ ನೀರು ತೆಗೆದುಕೊಳ್ಳಿ. ಅದನ್ನು 3 ನಿಮಿಷಗಳ ಕಾಲ ಕುದಿಸಿ. ಬೆಳ್ಳುಳ್ಳಿಯ 3-4 ಎಸಳನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಅಥವಾ ತುರಿದು ಬಿಡಿ. ಕುದಿಯುತ್ತಿರುವ ನೀರಿಗೆ ಹಾಕಿ. ಚೆನ್ನಾಗಿ ಕುದಿಸಿದ ಬಳಿಕ ಗ್ಯಾಸ್ ಆಫ್ ಮಾಡಿಬಿಡಿ. ಹಾಗೆಯೇ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಆ ಬೆಳ್ಳುಳ್ಳಿ ನೀರನ್ನು ಕುಡಿಯಿರಿ.
ಈ ರೀತಿ ಮಾಡುವುದರಿಂದ ನಿಮ್ಮ ಹಸಿವು ನಿಯಂತ್ರಣಕ್ಕೆ ಬರುತ್ತದೆ. ಮಿತಿಮೀರಿ ಊಟ ಮಾಡಬೇಕೆನಿಸುವುದಿಲ್ಲ. ಕಂಡ ಕಂಡಿದ್ದನ್ನೆಲ್ಲ ತಿನ್ನಬೇಕೆಂಬ ಆಸೆ ಮೂಡುವುದಿಲ್ಲ. ಸಹಜವಾಗಿಯೇ ತೂಕ ಇಳಿಸಲು ಬೆಳ್ಳುಳ್ಳಿ ನೀರು ಸಹಾಯ ಮಾಡುತ್ತದೆ.