ತೂಕ ಜಾಸ್ತಿಯಾದಾಗ ಮೈಬಗ್ಗಿಸಿ ವ್ಯಾಯಾಮ ಮಾಡೋದು ಕಷ್ಟ. ಜಿಮ್ ಮಾಡಲು ಕೂಡ ಕೆಲವೊಂದು ಅನಾನುಕೂಲಗಳಿರಬಹುದು. ಕೆಲವೊಮ್ಮೆ ಸಮಯ ಸಹ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ನಿಮ್ಮ ಆಹಾರವನ್ನು ಬದಲಾಯಿಸಿಕೊಳ್ಳಿ.
ತಿನ್ನಲು ಬಹಳ ರುಚಿಕರವಾದ ಆಹಾರವೊಂದನ್ನು ನಿಮ್ಮ ನಿತ್ಯದ ಡಯಟ್‌ನಲಿ ಸೇರ್ಪಡೆ ಮಾಡಿಕೊಳ್ಳಿ. ನಾವ್ ಹೇಳ್ತಿರೋದು ಎಲೆಕೋಸಿನ ಸೂಪ್ ಬಗ್ಗೆ. ಎಲೆಕೋಸು ಸೂಪ್ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ನಿಯಮಿತವಾಗಿ ಎಲೆಕೋಸು ಸೂಪ್ ಕುಡಿಯುತ್ತ ಬಂದರೆ ತೂಕ ಕಡಿಮೆಯಾಗುತ್ತದೆ.
ಎಲೆಕೋಸಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು ಕಂಡುಬರುತ್ತವೆ. ಕಬ್ಬಿಣ, ಸೋಡಿಯಂ, ಕೋಲೀನ್, ರಂಜಕ, ಸತು, ವಿಟಮಿನ್ ಕೆ, ವಿಟಮಿನ್ ಸಿ, ರೈಬೋಫ್ಲಾವಿನ್, ವಿಟಮಿನ್ ಇ, ವಿಟಮಿನ್ ಬಿ 6, ಪೊಟ್ಯಾಸಿಯಮ್, ಥಯಾಮಿನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಅನ್ನು ಇದು ಹೊಂದಿರುತ್ತದೆ. ಇದು ಎಂಟಿ-ಒಕ್ಸಿಡೆಂಟ್‌ಗಳನ್ನು ಸಹ ಹೊಂದಿದೆ, ಹಾಗಾಗಿ ದೇಹಕ್ಕೆ ಪ್ರಯೋಜನಕಾರಿಯಾಗಿದೆ.
ಎಲೆಕೋಸು ಸೂಪ್ ಕುಡಿಯುವುದರಿಂದ ಹೊಟ್ಟೆ ಬೇಗನೆ ತುಂಬುತ್ತದೆ, ಮತ್ತೆ ಮತ್ತೆ ಹಸಿವಿನ ಭಾವನೆ ಇರುವುದಿಲ್ಲ. ಎಲೆಕೋಸು ಸೂಪ್ ತಯಾರಿಸಲು ಚಿಕ್ಕದಾದ ಒಂದು ಎಲೆಕೋಸು, 2 ಈರುಳ್ಳಿ, 2 ಹಸಿರು ಮೆಣಸಿನಕಾಯಿ, 2 ಟೊಮ್ಯಾಟೊ ಮತ್ತು 3 ಕ್ಯಾರೆಟ್ ತೆಗೆದುಕೊಳ್ಳಿ. ಇವೆಲ್ಲವನ್ನೂ ಕತ್ತರಿಸಿ. ನಂತರ ಬಾಣಲೆಯಲ್ಲಿ 1 ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಅದಕ್ಕೆ ಈರುಳ್ಳಿ ಸೇರಿಸಿ.
ಈರುಳ್ಳಿ ಗೋಲ್ಡನ್ ಕಲರ್ ಬರುವವರೆಗೆ ಹುರಿಯಿರಿ. ನಂತರ ಟೊಮೆಟೊ, ಕ್ಯಾರೆಟ್ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಅದಾದ್ಮೇಲೆ ತುರಿದ ಎಲೆಕೋಸನ್ನು ಬಾಣಲೆಯಲ್ಲಿ ಹಾಕಿ. ಸ್ವಲ್ಪ ಉಪ್ಪು ಮತ್ತು 6-8 ಕಪ್ ನೀರು ಸೇರಿಸಿ. ಪ್ಯಾನ್ ಅನ್ನು ಮುಚ್ಚಿ, ಸುಮಾರು 10 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ರುಚಿಯಾದ ಎಲೆಕೋಸು ಸೂಪ್ ಕುಡಿಯಿರಿ.