ಸದ್ಯ ದೇಶಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ಸಂದರ್ಭದಲ್ಲಿಯೇ ಓಮಿಕ್ರಾನ್ ಉಪ ವಂಶಾವಳಿ BA.2 ರೂಪಾಂತರಿ ಕಾಣಿಸುತ್ತಿರುವುದು ಆತಂಕ ಹೆಚ್ಚಿಸುತ್ತಿದೆ. ಕೋಲ್ಕತ್ತಾದಲ್ಲಿ ಈ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಡಿ.22 ರಿಂದ 28ರ ವರೆಗೆ ಜೀನೋಮ್ ಅನುಕ್ರಮಕ್ಕಾಗಿ ಮಾದರಿಗಳನ್ನು ಕಳುಹಿಸಲಾಗಿತ್ತು. ಈ ಸಂದರ್ಭದಲ್ಲಿ ಶೇ.80ರಷ್ಟು ಪ್ರಕರಣಗಳಲ್ಲಿ ಈ ಉಪ ವಂಶಾವಳಿ ಕಂಡು ಬಂದಿದೆ. ಇದು ಹೆಚ್ಚು ವೈರಲ್ ಪ್ರಮಾಣ ಹೊಂದಿದೆ ಎಂದು ತಜ್ಞರು ಹೇಳಿದ್ದಾರೆ.
ಒಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ 50 ಕೊರೊನಾ ಮಾದರಿಗಳಲ್ಲಿ 35 ಪ್ರಕರಣಗಳಲ್ಲಿ BA.2 ರೂಪಾಂತರಿ ಕಂಡು ಬಂದಿದೆ. ಮತ್ತೊಂದು ಪ್ರಯೋಗಾಲಯಕ್ಕೆ ಕಳುಹಿಸಿದ್ದ 17 ಕೊರೊನಾ ಮಾದರಿಗಳಲ್ಲಿ 14 ಓಮಿಕ್ರಾನ್ ಹಾಗೂ BA.2 ರೂಪಾಂತರಿ ಪತ್ತೆಯಾಗಿದೆ. ಮೂರನೇ ಪ್ರಯೋಗಾಲಯಕ್ಕೆ ಕಳುಹಿಸಿದ್ದ 34 ಮಾದರಿಗಳಲ್ಲಿ BA.2 ರೂಪಾಂತರಿ ಕಂಡು ಬಂದಿದೆ.
ಈ ರೂಪಾಂತರಿ ಹೆಚ್ಚು ಪ್ರಸರಣ ಶಕ್ತಿ ಹೊಂದಿದ್ದು, ಈ ಉಪ ವಂಶವು ಭಿನ್ನವಾದ ಲಕ್ಷಣ ಹೊಂದಿದ್ದರೂ ಒಂದೇ ಕುಟುಂಬಕ್ಕೆ ಸೇರಿದ್ದಾಗಿದೆ. ಹೀಗಾಗಿ ಕ್ಲಿನಿಕಲ್ ಕೋರ್ಸ್ ನಲ್ಲಿ ಯಾವುದೇ ವ್ಯತ್ಯಾಸ ಹೊಂದಿಲ್ಲ. ಆದರೆ, ಓಮಿಕ್ರಾನ್ ಉಪ ಸ್ಥಿತಿಯು ಹಲವಾರು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಓಮಿಕ್ರಾನ್ ನ ಮೂರು ಉಪ ವಂಶಾವಳಿಯಲ್ಲಿ ಇದು ಕೂಡ ಒಂದಾಗಿದೆ.