ಬಿಸಿಲಿನ ಅಬ್ಬರಕ್ಕೆ ಇಡೀ ದೇಶವೇ ಬೆಂದು ಹೋಗಿದೆ. ವಿಪರೀತ ಬಿಸಿಗಾಳಿ, ಸೆಖೆ ತಡೆಯಲಾಗದೇ ಜನರು ದಿನವಿಡೀ ತಣ್ಣಗೆ ಲೀಟರ್ ಗಟ್ಟಲೆ ನೀರು ಕುಡಿಯುವುದು ಈಗ ಅನಿವಾರ್ಯ.
ಬಹುತೇಕ ಎಲ್ಲಾ ಮನೆಗಳಲ್ಲಿಯೂ ದೊಡ್ಡ ದೊಡ್ಡ ಪ್ಲಾಸ್ಟಿಕ್ ಕ್ಯಾನ್ ಗಳಲ್ಲಿ ನೀರನ್ನು ತುಂಬಿಸಿಟ್ಟುಕೊಂಡು ಅದನ್ನೇ ಕುಡಿಯುತ್ತಾರೆ. ಆದ್ರೆ ಈ ಕ್ಯಾನ್‌ಗಳು ಅತ್ಯಂತ ಅಪಾಯಕಾರಿ ಅನ್ನೋದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ.
ಬಿಸಿಲಿನಲ್ಲಿ ಅಥವಾ ಶಾಖವಿರುವ ಸ್ಥಳದಲ್ಲಿ ನೀವು ಪ್ಲಾಸ್ಟಿಕ್ ಇಟ್ಟರೆ ಅದರಲ್ಲಿರುವ ರಾಸಾಯನಿಕಗಳು ನೀರಿನಲ್ಲಿ ಮಿಶ್ರಣವಾಗುತ್ತವೆ. ಆ ಪ್ಲಾಸ್ಟಿಕ್ ಬಾಟಲಿಗಳಲ್ಲಿದ್ದ ನೀರನ್ನು ನೀವು ಕುಡಿದಾಗ ಅಪಾಯಕಾರಿ ಕೆಮಿಕಲ್ಸ್ ಸುಲಭವಾಗಿ ನಿಮ್ಮ ದೇಹವನ್ನು ಪ್ರವೇಶಿಸಿಬಿಡುತ್ತದೆ.
ಹಾಗಾಗಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವ ಅಭ್ಯಾಸವನ್ನು ಬಿಟ್ಟುಬಿಡುವುದೇ ಒಳ್ಳೆಯದು. ನ್ಯಾಶನಲ್ ಜಿಯೋಗ್ರಾಫಿಕ್ ವರದಿಯ ಪ್ರಕಾರ ಪ್ಲಾಸ್ಟಿಕ್ ವಸ್ತುಗಳು ಅವುಗಳಲ್ಲಿರುವ ಪಾನೀಯಗಳು ಅಥವಾ ಆಹಾರಗಳಲ್ಲಿ ಅಲ್ಪ ಪ್ರಮಾಣದ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ತಾಪಮಾನ ಮತ್ತು ಸಮಯ ಹೆಚ್ಚಾದಂತೆ, ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕ ಬಂಧಗಳು ಹೆಚ್ಚು ಒಡೆಯುತ್ತವೆ ಮತ್ತು ಸೋರಿಕೆಯಾಗುತ್ತವೆ.
ನೀವು ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿದರೆ ಮೈಕ್ರೋ-ಪ್ಲಾಸ್ಟಿಕ್‌ಗಳಿಂದ ಹೊಟ್ಟೆಗೆ ಸಂಬಂಧಿಸಿದ ರೋಗಗಳು ಬರಬಹುದು. ಪಿಸಿಓಎಸ್, ಅಂಡಾಶಯದ ಸಮಸ್ಯೆಗಳು, ಸ್ತನ ಕ್ಯಾನ್ಸರ್, ಕೊಲೊನ್ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಇತರ ಹಲವು ಸಮಸ್ಯೆಗಳಿಗೆ ಕಾರಣವಾಗುವ ಹಾರ್ಮೋನ್ ಅಸಮತೋಲನಕ್ಕೂ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿದರೆ ಆಗುವ ಅಪಾಯಗಳು
ಡಯಾಕ್ಸಿನ್ ಉತ್ಪಾದನೆ: ಪ್ಲಾಸ್ಟಿಕ್ ಬಾಟಲಿಗಳು ಸೂರ್ಯನಿಗೆ ನೇರವಾಗಿ ಒಡ್ಡಿಕೊಂಡಾಗ ಆ ತಾಪಮಾನದಿಂದ ಡಯಾಕ್ಸಿನ್ ಎಂಬ ವಿಷ ಬಿಡುಗಡೆಯಾಗುತ್ತದೆ. ಇದು ನಿಮ್ಮ ದೇಹ ಸೇರಿದರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.
BPA ಉತ್ಪಾದನೆ: Biphenyl A ಎಂಬುದು ಈಸ್ಟ್ರೊಜೆನ್-ಅನುಕರಿಸುವ ರಾಸಾಯನಿಕವಾಗಿದ್ದು, ಇದು ಮಧುಮೇಹ, ಸ್ಥೂಲಕಾಯತೆ, ಫಲವತ್ತತೆಯ ಸಮಸ್ಯೆಗಳು, ನಡವಳಿಕೆಯ ಸಮಸ್ಯೆಗಳು ಮತ್ತು ಹುಡುಗಿಯರಲ್ಲಿ ಆರಂಭಿಕ ಪ್ರೌಢಾವಸ್ಥೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇವುಗಳಿಂದ ಪಾರಾಗಬೇಕೆಂದರೆ ಪ್ಲಾಸ್ಟಿಕ್ ಬಾಟಲಿಯಿಂದ ನೀರನ್ನು ಸಂಗ್ರಹಿಸಿ ಕುಡಿಯದಿರುವುದು ಉತ್ತಮ.
ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಪರಿಣಾಮ: ನಾವು ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದರಿಂದ ನಮ್ಮ ರೋಗನಿರೋಧಕ ವ್ಯವಸ್ಥೆಯ ಮೇಲೆ ಅದು ಅಗಾಧವಾಗಿ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಬಾಟಲಿಗಳಿಂದ ರಾಸಾಯನಿಕಗಳು ಸೇವಿಸಲ್ಪಡುತ್ತವೆ ಮತ್ತು ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಹಾನಿ ಮಾಡುತ್ತವೆ.
ಲಿವರ್ ಕ್ಯಾನ್ಸರ್ ಮತ್ತು ವೀರ್ಯಾಣು ಸಂಖ್ಯೆ ಕುಸಿತ: ಪ್ಲಾಸ್ಟಿಕ್‌ನಲ್ಲಿ ಥಾಲೇಟ್ಸ್ ಎಂಬ ರಾಸಾಯನಿಕ ಇರುವ ಕಾರಣ, ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ಕುಡಿಯುವುದರಿಂದ ಯಕೃತ್ತಿನ ಕ್ಯಾನ್ಸರ್ ಬರುವ ಅಪಾಯವಿದೆ. ಜೊತೆಗೆ ವೀರ್ಯದ ಸಂಖ್ಯೆ ಕೂಡ ಕಡಿಮೆಯಾಗಬಹುದು.
ಬಾಟಲಿ ನೀರಿನಲ್ಲಿ, ವಿಶೇಷವಾಗಿ ಜನಪ್ರಿಯ ಬ್ರಾಂಡ್‌ಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳ ಮಿತಿಮೀರಿದ ಮಟ್ಟಗಳಿವೆ ಅನ್ನೋದು ಫ್ರೆಡೋನಿಯಾದಲ್ಲಿನ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ ಪತ್ತೆಯಾಗಿರುವ ಆಘಾತಕಾರಿ ಅಂಶ.
ಮೈಕ್ರೋಪ್ಲಾಸ್ಟಿಕ್‌ಗಳು 5 ಮಿಲಿಮೀಟರ್‌ಗಳು ಅಥವಾ ಅದಕ್ಕಿಂತ ಚಿಕ್ಕದಾದ ಸಣ್ಣ ಪ್ಲಾಸ್ಟಿಕ್ ಶಿಲಾಖಂಡರಾಶಿಗಳ ತುಣುಕುಗಳಾಗಿವೆ. 93 ಪ್ರತಿಶತದಷ್ಟು ಬಾಟಲಿ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್ ಕಂಡುಬರುತ್ತದೆ. ಮೈಕ್ರೋಪ್ಲಾಸ್ಟಿಕ್ ಸೇವನೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೂ ಈ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂಬುದು ವೈದ್ಯರ ಕಳಕಳಿ.