ಹೈದರಾಬಾದ್‌ನ ಜನನಿಬಿಡ ರಸ್ತೆಯೊಂದರಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಸಂಗದ ವಿಡಿಯೋ ದೇಶಾದ್ಯಂತ ಸಂಚಲನ ಮೂಡಿಸಿದೆ. ನಾಗರಾಜು ಮತ್ತು ಸೈಯದ್ ಅಶ್ರಿನ್ ಸುಲ್ತಾನಾ ಬಾಲ್ಯ ಸ್ನೇಹಿತರು. ಕಾಲ ಉರುಳಿದಂತೆ ಪ್ರೇಮಿಗಳಾದವರು. ಬಳಿಕ ಯುವತಿಯ ಕುಟುಂಬದ ತೀವ್ರ ವಿರೋಧದ ನಡುವೆ ಜನವರಿ 31 ರಂದು ಆರ್ಯ ಸಮಾಜದ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. ಅವರು ಪರಸ್ಪರ 10 ನೇ ತರಗತಿಯಿಂದಲೂ ಪರಿಚಿತರಾಗಿದ್ದವರು. ವಿವಾಹವಾಗಿದ್ದಕ್ಕೆ ಕೋಪಗೊಂಡ ಯುವತಿ ಕಡೆಯವರು ನಾಗರಾಜುವನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಬುಧವಾರ ರಾತ್ರಿ 8.45ರ ಸುಮಾರಿಗೆ ದಂಪತಿ ಬೈಕ್‌ನಲ್ಲಿ ಮನೆಯಿಂದ ಹೊರಟಾಗ ಇಬ್ಬರು ವ್ಯಕ್ತಿಗಳು ಅವರನ್ನು ತಡೆದು ನಾಗರಾಜುನನ್ನು ಎಳೆದೊಯ್ದು ಕಬ್ಬಿಣದ ರಾಡ್ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಸಿಸಿ ಕ್ಯಾಮರ ಈ ದೃಶ್ಯಾವಳಿಗಳು ಸೆರೆ ಹಿಡಿದಿದೆ. ಜನಸಮೂಹವು ಅಲ್ಲೇ ಗುಂಪಾಗಿದ್ದರೂ ಯಾರೂ ದಾಳಿಯನ್ನು ತಡೆಯಲು ಪ್ರಯತ್ನಿಸಲಿಲ್ಲ. ಅನೇಕರು ತಮ್ಮ ಮೊಬೈಲ್ ಫೋನ್ ಹೊರತೆಗೆದು ರೆಕಾರ್ಡ್ ಮಾಡುತ್ತಿದ್ದರು.
ಆಗಂತುಕರಿಂದ ತೀವ್ರ ಹಲ್ಲೆಗೊಳಗಾದ ನಾಗರಾಜು ಕೆಲವೇ ಕ್ಷಣದಲ್ಲಿ ಪ್ರಾಣ ಬಿಟ್ಟಿದ್ದ. ಅತನ ಪತ್ನಿ ಸಹಾಯಕ್ಕಾಗಿ ಕಿರುಚುತ್ತಿದ್ದ ದೃಶ್ಯ ಹೃದಯ ವಿದ್ರಾವಕವಾಗಿತ್ತು. ದಾಳಿಕೋರನನ್ನು ತನ್ನ ಸಹೋದರ ಎಂದು ಆಕೆ ಗುರುತಿಸಿದ್ದಾಳೆ. ನನ್ನ ಸಹೋದರ ಮತ್ತು ಇತರರು ನಡುರಸ್ತೆಯಲ್ಲಿ ನನ್ನ ಪತಿಯನ್ನು ಕೊಂದರು. ಸಹಾಯ ಮಾಡಲು ಯಾರೂ ಇರಲಿಲ್ಲ. ನಾನು ಎಲ್ಲರನ್ನೂ ಬೇಡಿಕೊಂಡೆ. ನನ್ನ ಕಣ್ಣೆದುರೇ ಅವನನ್ನು ಕೊಂದರು ಎಂದು ಸುಲ್ತಾನಾ ಮಾಧ್ಯಮಗಳಿಗೆ ತಿಳಿಸಿದರು.
ಏನೂ ಮಾಡಲು ಸಾಧ್ಯವಾಗದಿದ್ದರೆ ಜನರು ಏಕೆ ಬಂದರು? ಎಂದು ಪ್ರಶ್ನಿಸಿರುವ ಆಕೆ ಜನರ ಕಣ್ಣ ಮುಂದೆ ಎಲ್ಲವೂ ಸಂಭವಿಸಿತು. ಪತಿಯನ್ನು ಉಳಿಸಲು ಅವನ ಮೇಲೆ ಬಿದ್ದೆ. ಆದರೆ ನನ್ನನ್ನು ತಳ್ಳಿ ಕಬ್ಬಿಣದ ರಾಡ್‌ಗಳಿಂದ ಹೊಡೆದು ಆತನ ತಲೆಯನ್ನು ಜಖಂಗೊಳಿಸಿದರು ಎಂದು ವಿವರಿಸಿದ್ದಾರೆ.
ಮದುವೆಯ ನಂತರ ಸುಲ್ತಾನಾ ತನ್ನ ಹೆಸರನ್ನು ಪಲ್ಲವಿ ಎಂದು ಬದಲಾಯಿಸಿಕೊಂಡಿದ್ದಳು. ಇದೇ ವೇಳೆ ಆಕೆಯ ಮನೆಯವರು ನಾಗರಾಜುಗೆ ಆಕೆಯಿಂದ ದೂರ ಇರುವಂತೆ ಬೆದರಿಕೆ ಹಾಕಿದ್ದರು.
ಆಕೆಯ ಕುಟುಂಬದಿಂದ ಜೀವ ಬೆದರಿಕೆಯ ಕುರಿತು ನಾವು ಪೊಲೀಸರಿಗೆ ದೂರು ನೀಡಿದ್ದೆವು. ಪೊಲೀಸರ ನಿರ್ಲಕ್ಷ್ಯದಿಂದ ಇಂದು ನನ್ನ ಸಹೋದರನನ್ನು ಕಳೆದುಕೊಂಡಿದ್ದೇನೆ. ಅವನೇ ಕುಟುಂಬದ ಏಕೈಕ ಆಧಾರವಾಗಿದ್ದ ಎಂದು ನಾಗರಾಜು ಸಹೋದರಿ ರಮಾದೇವಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಭೀಕರ ಹತ್ಯೆ ಹೈದರಾಬಾದ್‌ನ ಸರೂರ್‌ನಗರ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ.