ಮೈಸೂರು : ಗ್ರಾಪಂನ ವಾರ್ಡ್ ಸಭೆಯಲ್ಲಿ ವಿರೋಧದ ಮಧ್ಯೆಯೇ ಪಿಡಿಒ ಅವರು ತಮ್ಮ ನೇತೃತ್ವದಲ್ಲಿ ಪ್ರೇಮಿಗಳ ವಿವಾಹ ನೆರವೇರಿಸಿದ್ದಾರೆ.
ಈ ಘಟನೆ ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಪಂನಲ್ಲಿ ನಡೆದಿದೆ. ಗ್ರಾಮದ ಯುವಕ ಹಾಗೂ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಇದಕ್ಕೆ ಎರಡೂ ಕುಟುಂಬಗಳಿಂದ ವಿರೋಧ ವ್ಯಕ್ತವಾಗಿತ್ತು.
ಬಸವರಾಜು(24) ಹಾಗೂ ಸುಚಿತ್ರಾ(19) ಪರಸ್ಪರ ಪ್ರೀತಿಸಿದ್ದರು. ಇವರ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸೂಚಿಸದಾಗ ಈ ಪ್ರೇಮಿಗಳು ಗ್ರಾಪಂ ಸಭೆಯಲ್ಲಿ ಮದುವೆ ಮಾಡುವಂತೆ ಮನವಿ ಮಾಡಿದ್ದಾರೆ.
ಇಂದು ಗ್ರಾಮದಲ್ಲಿ ಗ್ರಾಪಂನ ವಾರ್ಡ್ ಸಭೆ ನಡೆದಾಗ ಈ ವಿಚಾರವಾಗಿ ಗದ್ದಲ ಆರಂಭವಾಗಿತ್ತು. ಪ್ರೇಮಿಗಳು ಮಾತ್ರ ಪರಸ್ಪರ ಒಬ್ಬರನ್ನೊಬ್ಬರು ಬಿಟ್ಟು ಇರಲು ಒಪ್ಪಲಿಲ್ಲ. ಹೀಗಾಗಿ ಗ್ರಾಪಂನ ಪಿಡಿಒ ಮದ್ಯಸ್ಥಿಕೆ ವಹಿಸಿ ಎರಡೂ ಕುಟುಂಬಗಳಿಗೆ ಬುದ್ಧಿ ಹೇಳಿ ತಮ್ಮ ನೇತೃತ್ವದಲ್ಲಿಯೇ ಮದುವೆ ಮಾಡಿಸಿದ್ದಾರೆ.
ಪಿಡಿಒ ಅವರ ನಿರ್ಧಾರಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.