ಇನ್ನೇನು ಸಾಲು ಸಾಲು ಸಮಾರಂಭಗಳಿಗೆ ಭೇಟಿ ಕೊಡುವ ಸಮಯ. ಸಂಕ್ರಾತಿ ಹಬ್ಬದ ತರುವಾಯ ಉತ್ತರಾಯಣ ಪುಣ್ಯ ಕಾಲದಲ್ಲಿ ಸಮಾರಂಭಗಳ ಸಂಭ್ರಮ ಹೆಚ್ಚು. ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ, ಹುಟ್ಟುಹಬ್ಬ ಒಂದೇ ಎರಡೇ?
ಪ್ರತೀ ಸಮಾರಂಭಕ್ಕೂ ಏನಾದರೂ ಒಂದು ಉಡುಗೊರೆ ಕೊಡುವ ಅಭ್ಯಾಸ ಎಲ್ಲರಲ್ಲೂ ಇದ್ದೇ ಇದೆ. ಆದರೆ ನಾವು ಕೊಡುವ ಉಡುಗೊರೆ ಕೇವಲ ಶಿಷ್ಟಾಚಾರಕ್ಕೆ ಸೀಮಿತವಾಗಿರದೆ, ನೆನಪಿನ ಬುತ್ತಿಯಾದರೆ ಎಷ್ಟು ಚೆಂದ ಅಲ್ಲವೇ?
ಉಡುಗೊರೆ ಆಯ್ಕೆ ಮಾಡುವುದು ಒಂದು ಕಲೆ. ಸಾಮಾನ್ಯವಾಗಿ ನಾವು ಪರಿಚಯ ಇರುವವರ ಸಮಾರಂಭಗಳಿಗೆ ಹೋಗುವುದು ಅಲ್ಲವೇ? ಹಾಗಾಗಿ ಅವರ ಅಭಿರುಚಿಗೆ ತಕ್ಕಂತೆ ಉಡುಗೊರೆ ಆಯ್ಕೆ ಮಾಡುವುದು ಒಳ್ಳೆಯದು. ಅವರ ಅಭಿರುಚಿ ಹಾಗೂ ಅವಶ್ಯಕತೆಯನ್ನು ಗಮನದಲ್ಲಿ ಇಟ್ಟುಕೊಂಡೇ ಉಡುಗೊರೆಗಳನ್ನು ಆಯ್ಕೆ ಮಾಡಿ. ಕಡೆಯ ಕ್ಷಣದವರೆಗೂ ಯಾವ ಉಡುಗೊರೆ ಕೊಡಬೇಕು ಎಂಬುದನ್ನು ಯೋಚಿಸದೆ, ಕೊನೆಗೆ ಕೈ ಸಿಕ್ಕ ಶೋ ಪೀಸ್ ಗಳನ್ನೋ, ಗಣಪತಿಯ ವಿಗ್ರಹವನ್ನೋ ಕೊಡುವ ಬದಲು ನಿಮ್ಮ ಕಲಾವಂತಿಕೆಯನ್ನು ಉಪಯೋಗಿಸಿ.
ಮಕ್ಕಳ ಸಮಾರಂಭವಾದರೆ ಅವರ ಆಸಕ್ತಿಯನ್ನು ಕೆರಳಿಸುವ, ಕುತೂಹಲ ಮೂಡಿಸುವ ಆಟಿಕೆಗಳನ್ನು ಉಡುಗೊರೆಯಾಗಿ ಕೊಡುವ ಪ್ರಯತ್ನ ಮಾಡಿ. ಅಥವಾ ಒಳ್ಳೆಯ ಪುಸ್ತಕ ನೀಡಬಹುದು.
ನಿಮ್ಮ ಆಯ್ಕೆ, ಉಡುಗೊರೆ ಪಡೆದವರ ನೆನಪಿನಲ್ಲಿ ಸದಾ ಉಳಿಯುವ ಹಾಗೆ, ಅವರ ಖುಷಿಯನ್ನು ಇಮ್ಮಡಿಗೊಳಿಸುವ, ಅವಶ್ಯಕತೆಯನ್ನು ಪೂರೈಸಿದ ಧನ್ಯತಾ ಭಾವ ನಿಮ್ಮಲ್ಲಿ ಉಳಿಯಲಿ.