ಪ್ರೀತಿಸಿದ ಹುಡುಗಿಯನ್ನು ಆಕೆಯ ಕೋಣೆಯಲ್ಲಿಯೇ ಹತ್ಯೆ ಮಾಡಿದ ಯುವಕನೊಬ್ಬ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರದಂದು ಬೆಳಗಾವಿಯಲ್ಲಿ ನಡೆದಿದೆ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದ ಸವದತ್ತಿ ತಾಲೂಕಿನ ರಾಮಚಂದ್ರ ಬಸಪ್ಪ ತೆಣಗಿ, ತನ್ನ ಪ್ರೇಯಸಿ ಖಾಸಗಿ ಆಸ್ಪತ್ರೆಯ ಸ್ಟಾಫ್ ನರ್ಸ್ ರೇಣುಕಾ ಪಂಚಣ್ಣರ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.
ಈತ ಶುಕ್ರವಾರ ರಾತ್ರಿ ರೇಣುಕಾ ತಂಗಿದ್ದ ರೂಮಿಗೆ ತೆರಳಿದ್ದು, ಈ ವೇಳೆ ತನ್ನನ್ನು ಮರೆತು ಬಿಡುವಂತೆ ಆಕೆ ಹೇಳಿದ್ದಳು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ರಾಮಚಂದ್ರ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೂ ಮೊದಲು ಆತ ಡೆತ್ ನೋಟ್ ಬರೆದಿಟ್ಟಿದ್ದು, ನನ್ನನ್ನು ಪ್ರೀತಿಸುವ ನಾಟಕ ಆಡಿ ಮೋಸ ಮಾಡಿದ್ದಾಳೆ. ಅವಳ ಮೋಸಕ್ಕೆ ನಾನು ಬಲಿಯಾಗಿದ್ದಾನೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.